ಬೆಂಗಳೂರು: ‘ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಂದ ಮಾತ್ರಕ್ಕೆ ಕಾನೂನು ಬದಲಿಸಲಾಗದು’ ಎಂದು ಚಾಟಿ ಬೀಸಿರುವ ಹೈಕೋರ್ಟ್, ‘ಮಹಿಳೆಯರ ಮೇಲಿನ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನವರ ಅಶ್ಲೀಲತೆ ಎಲ್ಲ ಎಲ್ಲೆಗಳನ್ನೂ ಮೀರಿದ ದುಷ್ಕೃತ್ಯ’ ಎಂದು ಆಘಾತ ವ್ಯಕ್ತಪಡಿಸಿದೆ.
‘ನನ್ನ ಕಾರು ಚಾಲಕನ ಸ್ಯಾಮ್‌ಸಂಗ್ ಫೋನ್‌ನಿಂದ ಪಡೆದುಕೊಂಡಿರುವ ಫೋಟೊ ಮತ್ತು ಎಲ್ಲಾ ವಿಡಿಯೊಗಳನ್ನು ಒದಗಿಸಲು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಅರ್ಜಿದಾರ ಪ್ರಜ್ವಲ್ ಪರ ವಕೀಲ ಜಿ.ಅರುಣ್, ‘2024ರ ಏಪ್ರಿಲ್ 30ರಂದು ಮಹಜರು ನಡೆಸಿದ ಸಂದರ್ಭದಲ್ಲಿ ಮಾಜಿ ಕಾರು ಚಾಲಕನ ಫೋನ್ ಮತ್ತು ಸಿಮ್ ಕಾರ್ಡ್ ಜಪ್ತಿ ಮಾಡಲಾಗಿದೆ. ಆದರೆ, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ನೀಡಿರುವ ವರದಿಯಲ್ಲಿ ಎಷ್ಟು ಅಶ್ಲೀಲ ಚಿತ್ರಗಳಿವೆ ಎಂಬುದನ್ನು ಪ್ರಾಸಿಕ್ಯೂಷನ್ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಯನ್ನು ವಿಲಂಬಿಸಲು ಅರ್ಜಿದಾರರು ಈ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ನ್ಯಾಯಪೀಠ ನಿರ್ದೇಶನ ನೀಡಿದರೆ ಕ್ಲೋನ್ ಮಾಡಿರುವ ಎಲ್ಲಾ ದಾಖಲೆಗಳನ್ನೂ ಅರ್ಜಿದಾರರಿಗೆ ಒದಗಿಸಲಾಗುವುದು. ಆದರೆ, ಇದರಿಂದ ಕಾರು ಚಾಲಕನ ಫೋನ್‌ನಲ್ಲಿ ಸಂಗ್ರಹಗೊಂಡಿರುವ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಗೋಪಾಲಕೃಷ್ಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಹಾಲಿ ಪ್ರಕರಣಕ್ಕೆ ಅಗತ್ಯವಾದ ವಿಡಿಯೊ ಮತ್ತು ಫೋಟೊಗಳನ್ನು ಮಾತ್ರವೇ ಪ್ರಾಸಿಕ್ಯೂಷನ್ ಒದಗಿಸಲಿದೆ’ ಎಂದು ಸ್ಪಷ್ಟವಾಗಿ ತಿಳಿಸಿದರು.
ಕಾನೂನು ಪರಿಧಿಯಲ್ಲಿನ ಸೀಮಿತ ಅವಕಾಶವನ್ನು ಮಾತ್ರವೇ ಪುರಸ್ಕರಿಸಲಾಗುವುದು. ಇದನ್ನು ಹೊರತುಪಡಿಸಿ ಬೇರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವ ವಿಡಿಯೊ ಅಥವಾ ಚಿತ್ರಗಳನ್ನು ನೀಡಲಾಗದುಎಂ.ನಾಗಪ್ರಸನ್ನ ನ್ಯಾಯಮೂರ್ತಿ
ಅನ್ಯರ ಖಾಸಗಿತನ ಉಲ್ಲಂಘನೆಯ ಚಿತ್ರವೇಕೆ?
‘ನೀವು ನಿಮ್ಮ ಅರ್ಜಿದಾರರ ರಕ್ಷಣೆಗೆ ಏನನ್ನೋ ಮಾಡಬೇಕು ಎಂದುಕೊಂಡಿರುವುದಕ್ಕೆ ಬೇರೊಬ್ಬ ಮಹಿಳೆಯ ಖಾಸಗಿತನದ ಉಲ್ಲಂಘನೆಯಾಗುವುದು ಸಲ್ಲ. ಇಂತಹುದಕ್ಕೆ ನ್ಯಾಯಾಲಯ ಅವಕಾಶವನ್ನೂ ನೀಡುವುದಿಲ್ಲ. ಬೇರೆಯವರ ಖಾಸಗಿತನ ಉಲ್ಲಂಘಿಸುವ ಚಿತ್ರಗಳು ನಿಮಗೇಕೆ’ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಜ್ವಲ್ ಪರ ವಕೀಲರನ್ನು ಕಟುವಾಗಿ ಪ್ರಶ್ನಿಸಿದರು. ‘ಈ ಪ್ರಕರಣದಲ್ಲಿ ಅರ್ಜಿದಾರರು ಕೋರುತ್ತಿರುವ ದಾಖಲೆಗಳನ್ನು ಪ್ರಾಸಿಕ್ಯೂಷನ್ ಆಧರಿಸುತ್ತಿಲ್ಲ. ಸಂತ್ರಸ್ತೆಯ ಚಿತ್ರಗಳು ಮತ್ತು ಹೇಳಿಕೆ ಹೊರತುಪಡಿಸಿ ಬೇರೆ ಯಾವುದನ್ನೂ ಪ್ರಾಸಿಕ್ಯೂಷನ್ ಅವಲಂಬಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ ಪ್ರಜ್ವಲ್ ಮನವಿಯನ್ನು ಸಾರಾಸಗಟಾಗಿ ನಿರಾಕರಿಸಿ ಅರ್ಜಿ ವಿಲೇವಾರಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.