ADVERTISEMENT

ಹಿಂಬಡ್ತಿ ಆದೇಶ ವಾಪಸು

‘ಸುಪ್ರೀಂ’ ತೀರ್ಪು ಜಾರಿಗೆ ಸರ್ಕಾರದಿಂದ ಆದೇಶ

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:57 IST
Last Updated 15 ಮೇ 2019, 20:57 IST

ಬೆಂಗಳೂರು: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವ ಹಿನ್ನಲೆಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ನೌಕರರನ್ನು ಹಿಂಬಡ್ತಿಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಈ ಸಂಬಂಧ ಬುಧವಾರ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ‘ಕಾಯ್ದೆಯಲ್ಲಿರುವ ಅಂಶಗಳನ್ನು ಜಾರಿಗಳಿಸುವ ನಿಟ್ಟಿನಲ್ಲಿ ಒಂದು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಅನುಷ್ಠಾನಕ್ಕಾಗಿ ತಾತ್ಕಾಲಿಕ, ಅಂತಿಮ ಜ್ಯೇಷ್ಠತಾ ಪಟ್ಟಿಗಳನ್ನು ತಯಾರಿಸಿ, ಪ್ರಕಟಿಸುವ ಅರ್ಹತಾ ದಿನಾಂಕವನ್ನು ನಿಗದಿಪಡಿಸಬೇಕು, ಮುಂಬಡ್ತಿಗಳನ್ನು ಪುನರಾವಲೋಕನ ಮಾಡುವ, ವೇತನ ಮತ್ತು ಪಿಂಚಣಿಗಳನ್ನು ನಿಗದಿಪಡಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸ ಬೇಕು ಎಂದೂ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ADVERTISEMENT

ಲೋಕಸಭೆ ಚುನಾವಣೆ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ನೇಮಕ ಮಾಡಿರುವ ಸ್ಥಳಕ್ಕೆ ತೆರಳಬೇಕು. ಇದೇ 19ರಂದು ವಿಧಾನಸಭೆ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಿರುವ ಧಾರವಾಡ ಹಾಗೂ ಕಲಬುರ್ಗಿ ಜಿಲ್ಲೆಗಳು ಮತ್ತು ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಳಕ್ಕೆ ಅಥವಾ ಅಂತಹ ಸ್ಥಳಗಳಿಂದ ಅಧಿಕಾರಿಗಳ ಸ್ಥಳ ನಿಯುಕ್ತಿ ಆದೇಶಗಳನ್ನು ಮಾದರಿ ನೀತಿ ಸಂಹಿತಿ ಅವಧಿ ಪೂರ್ಣಗೊಂಡ ನಂತರ ಹೊರಡಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಗೊಂಡು ಅನುಷ್ಠಾನಗೊಳ್ಳುವವರೆಗೂ ಮುಂಬಡ್ತಿ ಹೊಂದಿದ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುವ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ.

ಹೀಗಾಗಿ, ಕೆಲವು ಇಲಾಖೆಗಳಲ್ಲಿ ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳು ಕನಿಷ್ಠ ಒಂದು ತಿಂಗಳು ಕರ್ತವ್ಯ ನಿರ್ವಹಿಸುವ ಸನ್ನಿವೇಶ
ಸೃಷ್ಟಿಯಾಗಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.