ADVERTISEMENT

ಕಾರ್ಮಿಕರ ಮಹತ್ವ ಸಾರಿದ ಕೊರೊನಾ ಬಿಕ್ಕಟ್ಟು: ಸಾಮಾಜಿಕ ಕಾರ್ಯಕರ್ತ ಪ್ರಸನ್ನ

ಸಾಮಾಜಿಕ ಕಾರ್ಯಕರ್ತ ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:19 IST
Last Updated 15 ಮೇ 2020, 19:19 IST
ಸಾಮಾಜಿಕ ಕಾರ್ಯಕರ್ತ ಪ್ರಸನ್ನ
ಸಾಮಾಜಿಕ ಕಾರ್ಯಕರ್ತ ಪ್ರಸನ್ನ   

ಬೆಂಗಳೂರು: ‘ವಲಸೆ ಕಾರ್ಮಿಕರನ್ನು ಅದಕ್ಷರು, ಅಸಮರ್ಥರು ಎಂದೇ ಪರಿಗಣಿಸಲಾಗುತ್ತಿತ್ತು ಅಥವಾ ಅಂತಹ ಮನಸ್ಥಿತಿಯನ್ನು ಎಲ್ಲರೂ ಹೊಂದಿದ್ದರು. ಆದರೆ, ಕೊರೊನಾ ಬಿಕ್ಕಟ್ಟಿನ ನಂತರ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಯಂತ್ರಗಳನ್ನು ಅವಲಂಬಿಸಿದ ಆರ್ಥಿಕತೆಗಿಂತ ಇಂತಹ ಕಾರ್ಮಿಕರನ್ನು ಹೊಂದಿರುವ ಆರ್ಥಿಕತೆಯೇ ಪರಿಹಾರದಂತೆ ಕಾಣುತ್ತಿದೆ’ ಎಂದು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಅಭಿಪ್ರಾಯಪಟ್ಟರು.

ದೆಹಲಿಯ ವಿವೇಕಾನಂದ ಕಾಲೇಜು ‘ಸಾಂಕ್ರಾಮಿಕ ರೋಗ ಮತ್ತು ಭಾರತೀಯ ಕಾರ್ಮಿಕರ ಮಹಾವಲಸೆ’ ಕುರಿತು ಶುಕ್ರವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಈಗ ರಾಕ್ಷಸ ಆರ್ಥಿಕತೆ ಸತ್ತಿದೆ. ಇಂತಹ ರಾಕ್ಷಸ ಆರ್ಥಿಕತೆಯ ದುಷ್ಪರಿಣಾಮವನ್ನು ನಾವು ಈಗಲೂ ಅರಿಯದೆ ಹೋದರೆ, ಭವಿಷ್ಯದಲ್ಲಿ ಇನ್ನೂ ಸಂಕಷ್ಟಕ್ಕೆ ಈಡಾಗಬೇಕಾಗುತ್ತದೆ’ ಎಂದರು.

‘ಕಾರ್ಮಿಕರೇ ಯಾವುದೇ ಉತ್ಪಾದನಾ ಕಾರ್ಯದ ಪ್ರಮುಖ ಅಂಗ ಎಂದು ನಾವು ಪರಿಗಣಿಸಿರಲೇ ಇಲ್ಲ.ಯಂತ್ರಗಳನ್ನು ಹೆಚ್ಚಾಗಿ ಅವಲಂಬಿಸಿದೆವೆಯೇ ವಿನಾ ಕಾರ್ಮಿಕರ ಕೌಶಲ ಅರಿವಿಗೆ ಬರಲಿಲ್ಲ. ಈಗಲೂಪ್ರಧಾನಿ, ಮುಖ್ಯಮಂತ್ರಿ ಅಥವಾ ಅಧಿಕಾರಿಗಳು ಕೇಂದ್ರೀಕೃತ ಮಾದರಿ ಬಗ್ಗೆಯೇ ಯೋಚಿಸುತ್ತಿದ್ದಾರೆ. ಆದರೆ, ಆರ್ಥಿಕತೆ ವೃದ್ಧಿಯಾಗಬೇಕೆಂದರೆ ವಿಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರಬೇಕು. ಹೊಸ ಆರ್ಥಿಕತೆ ವ್ಯವಸ್ಥೆ ಮಾನವನ ಕರಕುಶಲವನ್ನೇ ಆಧಾರವಾಗಿಟ್ಟುಕೊಂಡಿರಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಲೇಖಕ ಡಾ. ಅಬ್ದುಲ್‌ ರೆಹಮಾನ್‌, ‘ವಲಸೆ ಕಾರ್ಮಿಕರ ಪರಿಸ್ಥಿತಿ ಎಷ್ಟು ನಿಕೃಷ್ಟವಾಗಿತ್ತು ಎಂಬುದನ್ನು ಕೊರೊನಾ ತೋರಿಸಿಕೊಟ್ಟಿದೆ. ದಾನ–ಧರ್ಮಕ್ಕಿಂತ ಕಾರ್ಮಿಕರ ಘನತೆಯನ್ನು ಕಾಪಾಡುವ ಕಾರ್ಯ ಆಗಬೇಕಾಗಿದೆ. ದೇಶದ ಸಂಪತ್ತು ವೃದ್ಧಿಸಿದವರು ಅವರು. ಆದರೆ ಈಗ ಕೊಳ್ಳುವ ಸಾಮರ್ಥ್ಯವನ್ನೇ ಅವರು ಕಳೆದುಕೊಂಡಿದ್ದಾರೆ. ಅವರಿಗೆ ಆಹಾರ ಭದ್ರತೆ ಒದಗಿಸಬೇಕಾಗಿದೆಯಲ್ಲದೆ, ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಒತ್ತು ನೀಡುವ ಅಗತ್ಯವಿದೆ’ ಎಂದರು.

ದೆಹಲಿಯ ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾದ ಹೀನಾ ನಂದರಾಜು, ‘ದಿನಪತ್ರಿಕೆಗಳಲ್ಲಿ ಈಗ ಪ್ರಕಟವಾಗುತ್ತಿರುವ ವಲಸೆ ಕಾರ್ಮಿಕರ ಚಿತ್ರಗಳನ್ನು ನೋಡಿದರೆ, ಹಸಿವಿನ ತೀವ್ರತೆ ಎಂಥದು ಎಂಬುದು ತಿಳಿಯುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.