ADVERTISEMENT

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 1:01 IST
Last Updated 5 ಫೆಬ್ರುವರಿ 2021, 1:01 IST
ಪ್ರತಾಪಚಂದ್ರ ಶೆಟ್ಟಿ
ಪ್ರತಾಪಚಂದ್ರ ಶೆಟ್ಟಿ   

ಬೆಂಗಳೂರು: ತಮ್ಮ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆಗೆ ಅವಕಾಶ ಕೊಡದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು, ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಆ ಮೂಲಕ, ಕಳೆದ ಕೆಲವು ದಿನಗಳಿಂದ ಮೇಲ್ಮನೆಯಲ್ಲಿ ನಡೆಯುತ್ತಿದ್ದ ರಾಜಕೀಯ ಸಮರ ಹಾಗೂ ಗೊಂದಲಗಳಿಗೆ ತೆರೆ ಎಳೆದ ಅವರು, ಮುಂದಿನ ಸಭಾಪತಿ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಸದನದಲ್ಲಿ ಗುರುವಾರ ಸಂಜೆ ಹತ್ತು ನಿಮಿಷಗಳ ವಿದಾಯ ಭಾಷಣದ ಬಳಿಕ, ಕಲಾಪವನ್ನು ಶುಕ್ರವಾರ 11 ಗಂಟೆಗೆ ಮುಂದೂಡಿದ ಸಭಾಪತಿ, ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದರು. ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ನಾಯಕರು ಈ ಸಂದರ್ಭದಲ್ಲಿ ಇದ್ದರು.

ADVERTISEMENT

ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರತಾಪ ಚಂದ್ರ ಶೆಟ್ಟಿ ಅವರು, ‘ಹೇಳಬೇಕಾದ ಎಲ್ಲವನ್ನೂ ಸದನದಲ್ಲಿ ಹೇಳಿದ್ದೇನೆ. ನನಗೆ ಯಾವ ಬೇಸರವೂ ಇಲ್ಲ’ ಎಂದರು.

‘ಪರಿಷತ್‌ನಲ್ಲಿ ಹಿಂದೆ ನಡೆದ ಗಲಾಟೆ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ. ನಾನು ನನ್ನ ಕೆಲಸ ಚೆನ್ನಾಗಿ ಮಾಡಿದ್ದೇನೆ. ಎಲ್ಲಾ ನಂಬರ್ ಗೇಮ್ ಅಷ್ಟೇ’ ಎಂದೂ ಹೇಳಿದರು.

‘ರಾಜೀನಾಮೆಯಿಂದ ಯಾವುದೇ ಬೇಸರ ಇಲ್ಲ. ಸರ್ಕಾರ ನಡೆಸಲು ಬಹುಮತ ಮುಖ್ಯ. ಕಳೆದುಕೊಂಡ ಮೇಲೆ ಹೋಗಲೇ ಬೇಕು. ಇದರಲ್ಲಿ ವಿಶೇಷ ಏನೂ ಇಲ್ಲ. ಪಕ್ಷದಿಂದ ಯಾವುದೇ ಒತ್ತಡ ಇರಲಿಲ್ಲ’ ಎಂದು ಪ್ರತಾಪಚಂದ್ರ ಶೆಟ್ಟಿ ಅವರುಹೇಳಿದರು.

ವಿಧಾನಪರಿಷತ್ ನೂತನ ಸಭಾಪತಿ ನೇಮಕ ಪ್ರಕ್ರಿಯೆ ನಡೆಸುವ ಸಲುವಾಗಿ ಪರಿಷತ್ ಕಲಾಪವನ್ನು ಎರಡು ದಿನ ಮುಂದುವರಿಸುವಂತೆ ಗುರುವಾರ ಬೆಳಿಗ್ಗೆ ಸಭಾಪತಿಗೆ ಬಿಜೆಪಿ ಮನವಿ ಸಲ್ಲಿಸಿತ್ತು.

ಇದೀಗ, ಸಭಾಪತಿ ಸ್ಥಾನದಲ್ಲಿ ಕಲಾಪ ನಡೆಸಲಿರುವ ಉಪಸಭಾಪತಿ ಅವರು, ಪರಿಷತ್ ಅಧಿವೇಶನದ ಅವಧಿ ವಿಸ್ತರಿಸುವ ಅಥವಾ ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.