ADVERTISEMENT

ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 5:07 IST
Last Updated 28 ಜುಲೈ 2022, 5:07 IST
ಚ್.ಡಿ. ಕುಮಾರಸ್ವಾಮಿ
ಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಪ್ರವೀಣ್ ನೆಟ್ಟಾರುಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶ ‘ಜನೋತ್ಸವ’ವನ್ನು ರದ್ದುಪಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತಿ ಬೇಡವೆಂದು ನಾನು ಹೇಳಿದ್ದೆ. ಪಾಪ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಧ್ಯರಾತ್ರಿಯಲ್ಲೇ ಜ್ಞಾನೋದಯವಾಗಿದೆ. ಆದರೆ ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ಕೊಲೆಯನ್ನೇ ತಡೆಯಲಾಗದೇ ಈಗ 'ಕೃತಕ ಸಾಂತ್ವನ' ಹೇಳಿದರೇನು ಪ್ರಯೋಜನ ಎಂದು ಹೇಳಿದ್ದಾರೆ.

ತಾಯಿಂದಿರ ಆರ್ತನಾದ ಸರ್ಕಾರದ ಕಿವಿಗೆ ಇಂಪಾದ 'ನಾದ'ದಂತೆ ಕೇಳುತ್ತಿವೆಯಾ? ಬಿಜೆಪಿಯ ಮತಕ್ಕಾಗಿ ಮರಣಮೃದಂಗದ ಆಳ-ಅಗಲ ಈಗ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. ಕರಾವಳಿ ಕೆರಳಿದೆ. ಕರ್ನಾಟಕ ಕೆರಳುವುದು ಬಾಕಿ ಇದೆ ಎಂದು ಎಚ್ಚರಿಸಿದ್ದಾರೆ.

ಸಾವುಗಳೇಸಾಧನೆ...
ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, 'ಸಾವುಗಳನ್ನೇ ಸಾಧನೆ'ಗಳನ್ನಾಗಿ ಮಾಡಿಕೊಂಡು, ಅವುಗಳನ್ನೇ ಅಧಿಕಾರದ ಏಣಿ ಮಾಡಿಕೊಂಡವರಿಗೆ ಅಂತೂ ಪಾಪಪ್ರಜ್ಞೆ ಕಾಡಿತಲ್ಲ ಎನ್ನುವ ಸಮಾಧಾನ, ಸರ್ಕಾರ ಮುಖ ಉಳಿಸಿಕೊಂಡಿದೆ. ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. 'ಸಾವಿನಲ್ಲೂ ಸಿಂಪಥಿ' ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತದೆ. ಸಾಧನಾ ಸಮಾವೇಶ ನಿಂತಿತಲ್ಲ ಎನ್ನುವ ಹತಾಶೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರ್ಕಾರದ ವರ್ಷದ ಸಾಧನೆ!! ಎಂದು ಟೀಕಿಸಿದ್ದಾರೆ.

'ಮತಕ್ಕಾಗಿ ಕೋಮುಗಳ' ಇರಿಯುವುದಾ ಸಾಧನೆ?
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದಾ ಸಾಧನೆ? ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ 'ಮತಕ್ಕಾಗಿ ಕೋಮುಗಳ' ಇರಿಯುವುದಾ ಸಾಧನೆ? ಸಾಧನೆ ನೆಪದಲ್ಲಿ ನಲಿಯುವ ಮುನ್ನ ಕನಿಷ್ಠ ನಾಚುವ ಸೂಕ್ಷ್ಮತೆಯೂ ಇಲ್ಲವಲ್ಲ ಎಂದು ಪ್ರಶ್ನಿಸಿದರು.

ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು?
ಇನ್ನೆಷ್ಟು ಯುವಕರ ಕಗ್ಗೊಲೆ ಆಗಬೇಕು? ಅದೆಷ್ಟು ಬಡಮನೆಗಳ ದೀಪಗಳು ಆರಬೇಕು? ಮತ್ತೆಷ್ಟು ಹೆತ್ತ ಕರುಳುಗಳು ಕಣ್ಣೀರಿಡಬೇಕು? ಹರ್ಷ, ಚಂದ್ರು ತಾಯಿಂದರ ಆರ್ತನಾದ ಸರ್ಕಾರಕ್ಕೆ ಕೇಳಿಸಿದ್ದಿದ್ದರೆ ಪ್ರವೀಣ್ ನೆಟ್ಟಾರು ಅಮ್ಮನ ಆರ್ತನಾದ ಕೇಳುವ ಸ್ಥಿತಿ ಬರುತ್ತಿತ್ತಾ? ಕೊಲೆಯನ್ನೇ ತಡೆಯಲಾಗದೇ ಈಗ 'ಕೃತಕ ಸಾಂತ್ವನ' ಹೇಳಿದರೇನು ಪ್ರಯೋಜನ?

ಜನರಿಗೆ ಸರ್ಕಾರ ಮಾಡಿದ್ದೇನು?
ಏನು ಸಾಧನೆ ಅಂತ ಸರ್ಕಾರ ಜನರಿಗೆ ಹೇಳುತ್ತದೆ? ಶೇ 40 ಕಮಿಷನ್, ಕೋವಿಡ್ ಹೆಸರಿನಲ್ಲಿ ಕೊಳ್ಳೆ, ಅಧಿಕಾರಿಗಳ ವರ್ಗದಲ್ಲಿ ಪೇಮೆಂಟ್‌ ಕೋಟಾ, ಪಿಎಸ್ಐ ನೇಮಕದಲ್ಲಿ ಕಾಸಿನಾಟ, ಸಹಾಯಕ ಪ್ರಾಧ್ಯಾಕರ ನೇಮಕದಲ್ಲೂ ನೋಟಿನಾಟ, ಜೇಬು ತುಂಬಿಸಿಕೊಳ್ಳುವ ಧನದಾಟ ಬಿಟ್ಟರೆ, ಜನರಿಗೆ ಸರ್ಕಾರ ಮಾಡಿದ್ದೇನು? ಎಂದು ದೂರಿದರು.

ಸರ್ಕಾರ ಬದುಕಿದೆಯಾ? ಸತ್ತಿದೆಯಾ?
ನಡುರಸ್ತೆಯಲ್ಲಿ ಹರಿದ ಪ್ರವೀಣ್ ನೆಟ್ಟಾರು ನೆತ್ತರು, ನಾಡಿನ ಆತ್ಮಸಾಕ್ಷಿಯನ್ನು ಕಲಕಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ 2 ಕೊಲೆ ನಡೆದಿವೆ ಎಂದರೆ ಈ ಸರ್ಕಾರ ಬದುಕಿದೆಯಾ? ಸತ್ತಿದೆಯಾ? ಸತ್ತ ಸರ್ಕಾರದ ಸಾಹುಕಾರನಿಗೆ ಸಂಭ್ರಮದ ಚಿಂತೆ, ಆಗದ ಸಾಧನೆ ಹೇಳಿಕೊಳ್ಳುವ ಅನಿವಾರ್ಯತೆ.. ಇನ್ನಾದರೂ ಕಂಡೋರ ಮಕ್ಕಳನ್ನು ಸಾವಿನ ದವಡೆಗೆ ನೂಕಿ ಮತ ಫಸಲು ತೆಗೆಯುವ 'ನರಹಂತಕ ರಾಜಕಾರಣ' ನಿಲ್ಲಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.