ADVERTISEMENT

ಕೊರೊನಾ ಸೋಂಕು ತಗುಲಿ 99 ಪೊಲೀಸರ ಸಾವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 16:01 IST
Last Updated 19 ಫೆಬ್ರುವರಿ 2021, 16:01 IST
ಸೇವಾ ಕವಾಯತ್‌ನಲ್ಲಿ ಭಾಗವಹಿಸಲು ಬಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು
ಸೇವಾ ಕವಾಯತ್‌ನಲ್ಲಿ ಭಾಗವಹಿಸಲು ಬಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ಕುಮಾರ್ ಹೂಗುಚ್ಛ ನೀಡಿ ಸ್ವಾಗತಿಸಿದರು   

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ ಯೋಧರಾಗಿ ಕೆಲಸ ಮಾಡಿದ್ದ 99 ಪೊಲೀಸರು, ಸೋಂಕು ತಗುಲಿ ಮೃತಪಟ್ಟಿದ್ದಾರೆ. ಅವರೆಲ್ಲರ ಕುಟುಂಬಕ್ಕೆ ಮುಖ್ಯಮಂತ್ರಿ ಕಡೆಯಿಂದ ತಲಾ ₹ 30 ಲಕ್ಷ ಪರಿಹಾರ ಮಂಜೂರಾಗಿದೆ. ಕುಟುಂಬಕ್ಕೆ ಸಿಗಬೇಕಾದ ಅನುಕಂಪದ ಕೆಲಸ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸೇವಾ ಕವಾಯತ್‌ನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

’ಮೃತ ಪೊಲೀಸರ ಅವಲಂಬಿತರಿಗೆ ಕೆಲಸ ನೀಡುವ ವೇಳೆಯಲ್ಲಿ, ಗಂಡ–ಹೆಂಡತಿ ಹಾಗೂ ಮಕ್ಕಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಸಹೋದರ ಹಾಗೂ ಸಹೋದರಿ ಸೇರಿ ಕುಟುಂಬದ ಇತರೆ ಸದಸ್ಯರನ್ನೂ ಪರಿಗಣಿಸಲು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಕೊರೊನಾ ಸೋಂಕು ಇನ್ನೂ ಹೋಗಿಲ್ಲ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯವೂ ಜಾಗೃತರಾಗಿ ಇರಬೇಕು. ಪರಸ್ಪರ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.’

‘ಪೊಲೀಸರಿಗೆ ಕೊರೊನಾ ಲಸಿಕೆ ನೀಡುವ ಕೆಲಸ ನಡೆದಿದ್ದು, ಇದುವರೆಗೂ ಶೇ 50ರಷ್ಟು ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ವಾಸಕ್ಕೆ ಯೋಗ್ಯವಲ್ಲದ ಶಿಥಿಲಗೊಂಡಿರುವ ವಸತಿಗೃಹಗಳನ್ನು ನೆಲಸಮ ಮಾಡಿ, ಹೊಸ ವಸತಿಗೃಹ ನಿರ್ಮಿಸುವ ಗುರಿ ಇದೆ’ ಎಂದೂ ತಿಳಿಸಿದರು.

2,600 ಸಿಬ್ಬಂದಿ ಸೇವೆಗೆ ಸೇರ್ಪಡೆ:‘ಕೆಎಸ್‌ಆರ್‌ಪಿಗಾಗಿ ಈಗಾಗಲೇ 2,600 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅವರೆಲ್ಲರೂ ತರಬೇತಿ ಪಡೆಯುತ್ತಿದ್ದು, ಮುಂದಿನ ಎರಡು ತಿಂಗಳಿನಲ್ಲಿ ಅವರ ಸೇವೆ ಲಭ್ಯವಾಗಲಿದೆ’ ಎಂದು ಪ್ರವೀಣ್ ಸೂದ್ ಹೇಳಿದರು.

‘ವರ್ಷದ ತರಬೇತಿ ಮುಗಿಸಿ ಹಲವು ಅಭ್ಯರ್ಥಿಗಳು, ಕೆಎಸ್‌ಆರ್‌ಪಿ, ಡಿಎಆರ್, ಸಿಎಆರ್ ಹಾಗೂ ಇತರೆ ಪಡೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಹಲವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ನಾಗರಿಕ (ಸಿವಿಲ್) ಸೇವೆಗೆ ಆಯ್ಕೆಯಾಗುತ್ತಿದ್ದಾರೆ. ಅಂಥವರಿಗೆ ಪುನಃ ತರಬೇತಿ ನೀಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಮೂರ್ನಾಲ್ಕು ತಿಂಗಳ ತರಬೇತಿಯನ್ನೂ ಮಾತ್ರ ನೀಡಿ ಸೇವೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದೂ ತಿಳಿಸಿದರು.

‘ಪಡೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸುವುದಕ್ಕಾಗಿ ನೇಮಕಾತಿಯಲ್ಲಿ ಮಹಿಳೆಯರಿಗಾಗಿ ಶೇ 25ರಷ್ಟು ಮೀಸಲಾತಿ ನೀಡಲಾಗಿದೆ. ಸಮವಸ್ತ್ರ ಕಿಟ್‌ಗಾಗಿ ಈ ಬಾರಿ ₹ 45 ಕೋಟಿ ಮೀಸಲಿರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.