ADVERTISEMENT

ತಂದು ಬಿಟ್ಟ ಮಂಗಗಳ ವಿರುದ್ಧ ಸಮರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:23 IST
Last Updated 11 ಜನವರಿ 2019, 19:23 IST
   

ಶಿವಮೊಗ್ಗ:ಬಯಲುಸೀಮೆ ಸೇರಿ ವಿವಿಧ ಭಾಗಗಳಲ್ಲಿ ಸೆರೆಹಿಡಿದ ಮಂಗಗಳನ್ನು ದಟ್ಟ ಕಾನನಕ್ಕೆ ತಂದು ಬಿಡುವುದರ ವಿರುದ್ಧ ಮಲೆನಾಡಿಗರು ಸಮರ ಸಾರಿದ್ದಾರೆ.

ಮಂಗನ ಕಾಯಿಲೆ ಈಚಿನ ದಿನಗಳಲ್ಲಿ ವ್ಯಾಪಕವಾಗಿ ಹರಡಲು ಹೊರಗಿನ ಮಂಗಗಳೇ ಕಾರಣ. ಬಯಲುಸೀಮೆಗಳಲ್ಲಿ ತೆಂಗು, ಬಾಳೆ, ಹಣ್ಣಿನ ತೋಟಗಳು, ದೇವಸ್ಥಾನ, ಶಾಲಾ, ಕಾಲೇಜುಗಳ ಬಳಿ ಉಪಟಳ ನೀಡುವ ಮಂಗಗಳನ್ನು ಸೆರೆಹಿಡಿದು ತಂದು ಬಿಡುತ್ತಾರೆ. ದಶಕಗಳಿಂದ ನಡೆದುಕೊಂಡು ಬಂದ ಇಂತಹ ಕಾರ್ಯ ಈಗಲೂ ಮುಂದುವರಿದಿದೆ. ಹೀಗೆ ತಂದು ಬಿಟ್ಟ ಮಂಗಗಳ ಸಂತತಿ ಊಹಿಸಲೂ ಸಾಧ್ಯವಿಲ್ಲಷ್ಟುಹೆಚ್ಚಿದೆ. ಕಾಯಿಲೆ ಎಲ್ಲೆಡೆ ವ್ಯಾಪಿಸುತ್ತಿರುವುದಕ್ಕೂ ಇದೇ ಕಾರಣ
ಎನ್ನುವುದು ಕಾಯಿಲೆ ಕಾಣಿಸಿಕೊಂಡ ಪ್ರದೇಶಗಳ ಗ್ರಾಮಸ್ಥರ ಆರೋಪ.

‘ಎಲ್ಲೋ ಹಿಡಿದ ಮಂಗಗಳನ್ನು ಕೋಳಿ ಸಾಗಣೆ ಮಾಡುವ ಕಬ್ಬಿಣದ ಕೇಜ್‌ಗಳಲ್ಲಿ ತಂದು ನಾವಿರುವ ಕಾಡಿನ ಒಳಗೆ ಬಿಡುತ್ತಾರೆ. ಅಂತಹ ಮಂಗಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಗ್ರಾಮದ ಬಳಿ ಈ ವರ್ಷ ಅಧಿಕ ಸಂಖ್ಯೆಯಲ್ಲಿ ಮಂಗಗಳು ಸಾವು ಕಂಡಿವೆ. ಕಾಯಿಲೆ ಹರಡಿ ಗ್ರಾಮ ನಲುಗಿದೆ.ಹಲವರುಪ್ರಾಣ ಕಳೆದುಕೊಂಡಿದ್ದಾರೆ. ಮಂಗಗಳನ್ನು
ಇಲ್ಲಿಗೆ ತಂದು ಬಿಡಲು ಅವಕಾಶ ನೀಡುವುದಿಲ್ಲ. ಎಲ್ಲರೂ ಸೇರಿ ಹೋರಾಟ ನಡೆಸುತ್ತೇವೆ’ ಎನ್ನುತ್ತಾರೆ ಅರಲಗೋಡು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ್.

ADVERTISEMENT

ಕಪ್ಪುಮೂತಿ ಮಂಗ (ಮುಶ್ಯಾ) ಮೂಲ ನಿವಾಸಿ: ಪಶ್ಚಿಮಘಟ್ಟದ ಶರಾವತಿ ಅಭಯಾರಣ್ಯದಲ್ಲಿ ಕಪ್ಪುಮೂತಿಯ ಮುಶ್ಯಾಗಳೇ ಮೂಲ ನಿವಾಸಿಗಳು. ಅವುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು. 6 ದಶಕಗಳಿಗೂ ಮೊದಲು ಮಲೆನಾಡಿನಲ್ಲಿ ಮಂಗನ ಕಾಯಿಲೆಯೇ ಇರಲಿಲ್ಲ. ಸ್ವಾತಂತ್ರ್ಯಾ ನಂತರ ಹಸಿರುಕ್ರಾಂತಿಯ ಪರಿಣಾಮ ಕೃಷಿಭೂಮಿ ಹೆಚ್ಚುತ್ತಾ ಹೋಯಿತು. ಅಲ್ಲೆಲ್ಲ ಕಾಡು ನಾಶವಾದಂತೆ ಅಲ್ಲಿದ್ದ ಕೆಂಪುಮೂತಿಯ ಮಂಗಗಳನ್ನು ಪಶ್ಚಿಮಘಟ್ಟಕ್ಕೆ ತಂದು ಬಿಡುವ ಪ್ರವೃತ್ತಿ ಆರಂಭವಾಯಿತು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅವುಗಳ ಫಲವಾಗಿಯೇ ಕಾಯಿಲೆ ಮಲೆನಾಡಿಗೆ ಅಂಟಿಕೊಂಡಿತು ಎಂದು ವಿಶ್ಲೇಷಿಸುತ್ತಾರೆ ಪರಿಸರ ತಜ್ಞರು.

ಸಮೂಹ ಸಂಹಾರಕ್ಕೆ ಹೆಚ್ಚಿದ ಒತ್ತಡ:

ಮಂಗನ ಕಾಯಿಲೆಗೆ ಆರು ದಶಕಗಳಲ್ಲಿ 800ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಈಗಲಾದರೂ
ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಾಮೂಹಿಕ ಸಂಹಾರಕ್ಕೆ ಆದೇಶ ಮಾಡಬೇಕು ಎಂದು ಆಗ್ರಹಿಸಿ ಕೆಎಫ್‌ಡಿ ಜನಜಾಗೃತಿ ಒಕ್ಕೂಟ ಆಂದೋಲನ ಆರಂಭಿಸಿದೆ.

ಹಿಮಾಚಲ ಪ್ರದೇಶದಲ್ಲಿ ಮಂಗಗಳ ಉಪಟಳದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು 2016ರಲ್ಲಿ ಸಾಮೂಹಿಕ ಸಂಹಾರಕ್ಕೆ ಅವಕಾಶ ನೀಡಲಾಗಿತ್ತು. ಮಲೆನಾಡಿನಲ್ಲಿ ಜೀವಗಳೇ ಬಲಿಯಾಗುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ತಕ್ಷಣ ಆದೇಶ ಹೊರಡಿಸಬೇಕು ಎಂದು ಆಗ್ರಹಿಸುತ್ತಾರೆ ಒಕ್ಕೂಟದ ಸಂಚಾಲಕರಾದ ಶಶಿ ಸಂಪಳ್ಳಿ, ಕೆ.ಪಿ. ಶ್ರೀಪಾಲ್.

ಮತ್ತಷ್ಟು ಮಂಗಗಳ ಮೃತದೇಹ ಪತ್ತೆ:

ತೀರ್ಥಹಳ್ಳಿ, ಹೊಸನಗರ, ಸಾಗರ ತಾಲ್ಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರವೂ ಮಂಗಗಳ ಮೃತದೇಹಗಳು ಪತ್ತೆಯಾಗಿವೆ. ಸತ್ತ ಮಂಗಗಳು ಕಂಡ ತಕ್ಷಣ ಆ ಭಾಗದ ಜನರಿಗೆ ಲಸಿಕೆ ಹಾಕುವ ಕೆಲಸದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ.

ಕುಂದಾಪುರದಲ್ಲಿ ಮತ್ತೆ 3 ಮಂಗಗಳ ಶವ ಪತ್ತೆ

ಉಡುಪಿ: ಕುಂದಾಪುರ ತಾಲ್ಲೂಕಿನ ಬೆಳ್ವೆ, ಹೊಸಂಗಡಿ, ಕಂಡ್ಲೂರು ಗ್ರಾಮಗಳಲ್ಲಿ ಶುಕ್ರವಾರ ಮತ್ತೆ ಮೂರು ಮಂಗಗಳ ಶವ ಪತ್ತೆಯಾಗಿದೆ. ಇದುವರೆಗೂ 11 ಮಂಗಗಳ ಶವ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ.

ಶಂಕಿತ ಪ್ರಕರಣ ಪತ್ತೆ: ಕುಂದಾಪುರ ತಾಲ್ಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಸೋಂಕು ತಗುಲಿರಬಹುದು ಎಂಬ ಅನುಮಾನದ ಮೇಲೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮಂಗನ ಕಾಯಿಲೆ ಎಂದು ಇದುವರೆಗೂ ದೃಢಪಟ್ಟಿಲ್ಲ ಎಂದು ಡಿಎಚ್‌ಒ ಡಾ.ರೋಹಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.‌

ಮಂಗಗಳ ಶವಗಳನ್ನು ಶಿವಮೊಗ್ಗಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕಿನಲ್ಲಿ ಮಂಗಗಳ ಶವಗಳು ಮಾತ್ರ ಪತ್ತೆಯಾಗಿವೆ. ಪ್ರಯೋಗಾಲಯದ ವರದಿ ಬಂದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.

ಮಂಗಳೂರು ವರದಿ: ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಹಾಗೂ ಲಾಯಿಲ ಸಮೀಪದ ಕನ್ನಾಜೆ ಎಂಬಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಮಂಗನ ಶವ ಪತ್ತೆಯಾಗಿದ್ದು, ಅವುಗಳನ್ನು ಸ್ಥಳದಲ್ಲೇ ಹೂಳಲಾಗಿದೆ. ಈ ಎರಡು ಮಂಗಗಳ ದೇಹದ ಭಾಗವನ್ನು ಸಂಗ್ರಹಿಸಲು ಸಾಧ್ಯವೇ ಇಲ್ಲದಷ್ಟು ಅದು ಕೊಳೆತು ಹೋಗಿತ್ತು. ಹೀಗಾಗಿ ಸ್ಥಳಕ್ಕೆ ತೆರಳಿದ ತಜ್ಞರು ಕ್ರಿಮಿನಾಶಕ ಹಾಕಿ ಶಂಕಿತ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಬೆಳ್ತಂಗಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕಲಾಮಧುತಿಳಿಸಿದ್ದಾರೆ.

ಮಂಗಗಳ ಸಾವು: ಪರೀಕ್ಷೆಗೆ ದೇಹದ ಮಾದರಿ

ಸಿದ್ದಾಪುರ (ಉತ್ತರ ಕನ್ನಡ): ‘ತಾಲ್ಲೂಕಿನ ವಿವಿಧೆಡೆ ಇದುವರೆಗೆಏಳುಮಂಗಗಳು ಸತ್ತಿವೆ.ಅವುಗಳಲ್ಲಿ ಎರಡು ಮಂಗಗಳ ಅಂಗಾಂಗಳನ್ನು ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

‘ಇದುವರೆಗೆ ವರದಿಯಾಗಿರುವ ಮಂಗಗಳ ಸಾವು, ಮಂಗನ ಕಾಯಿಲೆಯಿಂದ ಆಗಿರುವಂತೆ ಕಂಡುಬಂದಿಲ್ಲ. ಅದರೊಂದಿಗೆ ಕೆಲವು ದಿನಗಳ ಹಿಂದೆ ಪುಣೆಗೆ ರಕ್ತದ ಮಾದರಿ ಕಳುಹಿಸಲಾಗಿದ್ದ ತಾಲ್ಲೂಕಿನ ವ್ಯಕ್ತಿಗೆ ಮಂಗನ ಕಾಯಿಲೆ ಇಲ್ಲ ಎಂಬ ವರದಿ ಬಂದಿದೆ’ ಎಂದು ಅವರುಸ್ಪಷ್ಟಪಡಿಸಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಸೂಚನೆ

ಬೆಂಗಳೂರು: ಮಂಗನ ಕಾಯಿಲೆ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ರೋಗಿಗಳು ಆತಂಕ ಪಡುವುದು ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಹರಡದಂತೆ ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ರೋಗದ ಭೀತಿಗೆ ಮಲೆನಾಡಿಗರು ಒಳಗಾಗುವುದು ಬೇಡ ಎಂದು ಹೇಳಿದರು.

ಮಂಗನ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.