ADVERTISEMENT

ಬೆಳಗಾವಿ: ನೆರೆ ನೋವಲ್ಲಿ ಪರೀಕ್ಷೆಗೆ ಸಿದ್ಧತೆ

ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಹಲವು ಚಟುವಟಿಕೆ

ಎಂ.ಮಹೇಶ
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
ಗೋಕಾಕ ತಾಲ್ಲೂಕು ಮಮದಾಪುರದ ಚಿಂತಾಮಣಿ ಪಾವಟೆ ಪ್ರೌಢಶಾಲೆ ಶಿಕ್ಷಕರು ‘ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯ ಮನೆ ಆವರಣದಲ್ಲೇ ಪಾಠ ಹೇಳಿದರು
ಗೋಕಾಕ ತಾಲ್ಲೂಕು ಮಮದಾಪುರದ ಚಿಂತಾಮಣಿ ಪಾವಟೆ ಪ್ರೌಢಶಾಲೆ ಶಿಕ್ಷಕರು ‘ಗುರೂಜಿ ಬಂದರು ಗುರುವಾರ’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯ ಮನೆ ಆವರಣದಲ್ಲೇ ಪಾಠ ಹೇಳಿದರು   

ಬೆಳಗಾವಿ: ರಾತ್ರಿ ತರಗತಿಗಳು, ಫೋನ್‌ ಇನ್‌, ಗುರೂಜಿ ಬಂದರು ಗುರುವಾರ ಕಾರ್ಯಕ್ರಮ, ಗುಂಪು ಅಧ್ಯಯನ, ಪ್ರಾಣಾಯಾಮ, ಶಿಕ್ಷಕರಿಂದ ಬೆಳಿಗ್ಗೆಯೇ ಫೋನ್‌ ಕರೆ (ವೇಕ್‌ ಅಪ್‌ ಕಾಲ್‌), ಮಾದರಿ ಪ್ರಶ್ನೆಪತ್ರಿಕೆ ವಿತರಣೆ, ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಪ್ರತಿ ವಿತರಣೆ, ರಂಗೋಲಿ ಹಾಗೂ ಮಹೆಂದಿ ಮೂಲಕ ಗಣಿತ ವಿಷಯಗಳ ಮನವರಿಕೆ.

– ನೆರೆ ಮತ್ತು ಅತಿವೃಷ್ಟಿಯಿಂದ ನೊಂದಿರುವ ಜಿಲ್ಲೆಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಪ್ರಮುಖ ಚಟುವಟಿಕೆಗಳಿವು.

ಇಲ್ಲಿ ಎರಡು (ಬೆಳಗಾವಿ ಹಾಗೂ ಚಿಕ್ಕೋಡಿ) ಶೈಕ್ಷಣಿಕ ಜಿಲ್ಲೆಗಳಿವೆ. ಇವು ಹೋದ ವರ್ಷ ತೀವ್ರ ಕುಸಿತ ಕಂಡಿದ್ದವು. ಈ ಬಾರಿ ಅಗ್ರಸ್ಥಾನಕ್ಕೇರಲು ಕಸರತ್ತು ನಡೆಸುತ್ತಿವೆ. ಬೆಳಗಾವಿಯು ಶೇ 77.43ರಷ್ಟು ಫಲಿತಾಂಶ ಪಡೆದು, 24ನೇ ಸ್ಥಾನದಲ್ಲಿತ್ತು. ಅದಕ್ಕಿಂತ ಹಿಂದಿನ ಸಾಲಿನಲ್ಲಿ ಶೇ 84.77ರಷ್ಟು ಫಲಿತಾಂಶ (6ನೇ ಸ್ಥಾನ) ಗಳಿಸಿತ್ತು. ಚಿಕ್ಕೋಡಿಯು ಹೋದ ವರ್ಷ ಶೇ 84.09ರಷ್ಟು ಅಂಕ ಗಳಿಸಿ 13ನೇ ಸ್ಥಾನಕ್ಕೆ ಕುಸಿದಿತ್ತು. ಅದಕ್ಕಿಂತ ಹಿಂದೆ ಶೇ 87.01ರಷ್ಟು ಫಲಿತಾಂಶ ಪಡೆದು 3ನೇ ಸ್ಥಾನಕ್ಕೇರಿತ್ತು.

ADVERTISEMENT

ತರಗತಿಗಳು ನಡೆದಿರಲಿಲ್ಲ

ಹೋದ ವರ್ಷ ಆಗಸ್ಟ್‌ನಲ್ಲಿ ಉಂಟಾದ ನೆರೆ, ಅತಿವೃಷ್ಟಿಯಿಂದ ಬರೋಬ್ಬರಿ 2,307 ಸರ್ಕಾರಿ ಶಾಲೆಗಳಿಗೆ ಹಾನಿಯಾಗಿತ್ತು. ಮನೆ ಹಾಗೂ ಶಾಲೆಗಳಲ್ಲಿದ್ದ ಪಠ್ಯಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳು ಕೊಚ್ಚಿ ಹೋಗಿದ್ದವು. ಬರೋಬ್ಬರಿ ಎರಡರಿಂದ ಮೂರು ತಿಂಗಳವರೆಗೆ ತರಗತಿಗಳು ಸಮರ್ಪಕವಾಗಿ ನಡೆದಿರಲಿಲ್ಲ! ಬಳಿಕ ಕೊಂಚ ಚೇತರಿಸಿಕೊಂಡಿರುವ ಅವರನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸಲು ಅಧಿಕಾರಿಗಳು ಸಾಹಸ ಪಡುತ್ತಿದ್ದಾರೆ. ಪ್ರವಾಹದಿಂದ ಚಿಕ್ಕೋಡಿ ಜಿಲ್ಲೆಯಲ್ಲಿ ಶಾಲೆಗಳಿಗೆ ಹೆಚ್ಚು ಹಾನಿಯಾಗಿತ್ತು. ಹೀಗಾಗಿ, ಅಲ್ಲಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಯತ್ನಿಸಲಾಗುತ್ತಿದೆ.

ಗೋಕಾಕ ವಲಯದ ಮಮದಾಪುರದ ಚಿಂತಾಮಣಿ ಪಾವಟೆ ಪ್ರೌಢಶಾಲೆ ಶಿಕ್ಷಕರು ‘ಗುರೂಜಿ ಬಂದರು ಗುರುವಾರ’ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪ್ರತಿ ಗುರುವಾರ ಶಾಲಾವಧಿ ಬಳಿಕ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಪಾಠ ಹೇಳಿಕೊಡುತ್ತಿದ್ದಾರೆ.

‘ವಲಯದ 6,135 ಮಕ್ಕಳಿಗೆ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಉತ್ತರಪತ್ರಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಪ್ರವಾಹದಿಂದ ಜನರು ನೊಂದಿರುವುದರಿಂದ, ವೆಚ್ಚವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರಿಸಿದ್ದಾರೆ. ‘ಗೆಲುವಿನ ದೀವಿಗೆ’, ‘ಅಭ್ಯಾಸದ ದೀವಿಗೆ’ ಪುಸ್ತಕವನ್ನು ಎಲ್ಲ 74 ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ತಲಾ 15ರಿಂದ 20ರಂತೆ ನೀಡಲಾಗಿದೆ’ ಎಂದು ಮೂಡಲಗಿ ಬಿಇಒ ಅಜಿತ್‌ ಮನ್ನಿಕೇರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.