ADVERTISEMENT

ಪುನರ್ವಸತಿಗೆ ಯೋಜನೆ ಸಿದ್ಧಪಡಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಜೋಪಡಿ ತೆರವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:27 IST
Last Updated 10 ಫೆಬ್ರುವರಿ 2020, 20:27 IST

ಬೆಂಗಳೂರು: ‘ಅಕ್ರಮ ಬಾಂಗ್ಲಾ ವಲಸಿಗರೆಂಬ ಆರೋಪದಡಿ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೆರವುಗೊಳಿಸಲಾದ ಜೋಪಡಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ‘ಪೀಪಲ್ಸ್‌ ಯೂನಿಯನ್‌ ಫಾರ್ ಸಿವಿಲ್‌ ಲಿಬರ್ಟೀಸ್ ಕರ್ನಾಟಕ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ‘ಘಟನೆಗೆ ಕಾರಣವಾಗಲು ತಪ್ಪು ಮಾಹಿತಿ ನೀಡಿದ ಮಾರತ್ತಹಳ್ಳಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌
ಬಿ.ಪಿ. ಗಿರೀಶ್ ಅವರನ್ನು ಅಮಾನತು ಮಾಡಲಾಗಿದೆ. ಜೋಪಡಿಗಳಲ್ಲಿ ಅಸ್ಸಾಂ ಮತ್ತು ತೆಲಂಗಾಣದ ಕೂಲಿ ಕಾರ್ಮಿಕರಿದ್ದರು ಎಂದು ಗುರುತಿಸ ಲಾ ಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ಇದಕ್ಕೆ ನ್ಯಾಯಪೀಠ, ‘ಜೋಪಡಿ ನಿವಾಸಿಗಳು ತಮ್ಮ ಸೂರು ಕಳೆದುಕೊಳ್ಳಲು ಸರ್ಕಾರ ಮತ್ತು ಬಿಬಿಎಂಪಿಯೇ ಕಾರಣ. ನಿರಾಶ್ರಿತರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ. ಆದ್ದರಿಂದ, ಯಾವ ವಿಧಾನದಲ್ಲಿ ಈ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸ ಬಹುದು, ತೆರವು ಕಾರ್ಯಾಚರಣೆ ಯಲ್ಲಿ ಯಾರೆಲ್ಲಾ ಸಂತ್ರಸ್ತರಾಗಿದ್ದಾರೆ ಎಂಬುದನ್ನು ಗುರುತಿಸಿ’ ಎಂದು ನಿರ್ದೇಶಿಸಿದೆ.

‘ಎರಡು ವಾರಗಳಲ್ಲಿ ತಾತ್ಕಾಲಿಕ ವಾಗಿ ಅವರಿಗೆ ಏನೆಲ್ಲಾ ವ್ಯವಸ್ಥೆ ಏನು ಕಲ್ಪಿಸಬಹುದು ಎಂಬ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೊತೆಗೆ ಪರಿಶೀಲನೆ ನಡೆಸಿ ನೆರವು ಕಲ್ಪಿಸಿ ಮತ್ತು ಈ ಕುರಿತ ಸಮಗ್ರ ಯೋಜನಾ ವರದಿಯನ್ನು ಒಂದು ತಿಂಗಳಲ್ಲಿ ಕೋರ್ಟ್‌ಗೆ ಸಲ್ಲಿಸಿ’ ಎಂದು ನಿರ್ದೇಶಿಸಿದೆ. ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.