ADVERTISEMENT

ನರೇಗಾ ಅಕ್ರಮ ತನಿಖೆಗೆ ಹಿಂದಿನ ಸರ್ಕಾರ ಬ್ರೇಕ್

2007ರಿಂದ 2012ರವರೆಗಿನ 9.95ಲಕ್ಷ ಕಾಮಗಾರಿ ಅವ್ಯವಹಾರ ಆರೋಪ

ಇ.ಎಸ್.ಸುಧೀಂದ್ರ ಪ್ರಸಾದ್
Published 26 ಮೇ 2023, 23:44 IST
Last Updated 26 ಮೇ 2023, 23:44 IST
ನರೇಗಾ ಕಾಮಗಾರಿ (ಸಾಂದರ್ಭಿಕ ಚಿತ್ರ)
ನರೇಗಾ ಕಾಮಗಾರಿ (ಸಾಂದರ್ಭಿಕ ಚಿತ್ರ)   

ಧಾರವಾಡ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 2007ರಿಂದ 2012ರವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ನಡೆಯುತ್ತಿದ್ದ ಲೋಕಾಯುಕ್ತ ತನಿಖೆಯನ್ನು ಚುನಾವಣೆ ಘೋಷಣೆಗೂ ಒಂದು ದಿನ ಮೊದಲು ಆಗ ಇದ್ದ ಸರ್ಕಾರವು ಹಿಂದಕ್ಕೆ ಪಡೆದಿದೆ.

ಇದರಿಂದಾಗಿ ಈ ಅವಧಿಯಲ್ಲಿ ರಾಜ್ಯದ ಆರು ಸಾವಿರ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿನ 9.85 ಲಕ್ಷ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ 9 ವರ್ಷಗಳ ನಂತರ ತನಿಖೆಯೇ ನಡೆಯದೆ ಕೊನೆಗೊಂಡಂತಾಗಿದೆ.

ರಾಜ್ಯದಲ್ಲಿ 2005ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕುರಿತಂತೆ 2007ರಿಂದ ಐದು ವರ್ಷಗಳ ಲೆಕ್ಕಪರಿಶೋಧನೆಯನ್ನು ಮಹಾಲೇಖಪಾಲರ (ಸಿಎಜಿ) ಕಚೇರಿಯು 2013ರಲ್ಲಿ ನಡೆಸಿತ್ತು. ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಗದಗ, ಹಾಸನ ರಾಯಚೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಹಳಷ್ಟು ಅವ್ಯವಹಾರ ಮತ್ತು ಹಣ ದುರುಪಯೋಗ ನಡೆದಿರುವ ಕುರಿತು ವರದಿಯಲ್ಲಿ ಉಲ್ಲೇಖ ಆಗಿತ್ತು.

ADVERTISEMENT

ನರೇಗಾ ಅಡಿಯಲ್ಲಿ ಕೂಲಿಕಾರರ ಹೆಸರಿನಲ್ಲಿ ಹಣ ತೆಗೆದಿರುವ, ಹಣ ದುರುಪಯೋಗ ಮಾಡಿಕೊಂಡಿರುವ, ಯಂತ್ರಗಳನ್ನು ಉಪಯೋಗಿಸಿ ನಡೆಸಿದ ಕಾಮಗಾರಿಗಳಿಗೆ ಉದ್ಯೋಗ ಖಾತ್ರಿ ಮೂಲಕ ಬಿಲ್ ಪಾವತಿಸಿರುವ ಹಾಗೂ 60:40ರ ಅನುಪಾತದಲ್ಲಿ ಕಾಮಗಾರಿ ನಡೆಸದಿರುವ ಕುರಿತು ವರದಿಯಲ್ಲಿ ವಿವರ ಇತ್ತು. 

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, 2014ರಲ್ಲಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿತ್ತು. ಇಡೀ ರಾಜ್ಯದಲ್ಲಿ ಇಂಥ ಪ್ರಕರಣಗಳು ನಡೆದಿರುವ ಸಾಧ್ಯತೆ ಇದ್ದು, ಸಮಗ್ರ ತನಿಖೆ ಕೈಗೊಳ್ಳುವಂತೆ ಸೂಚಿಸಿತ್ತು. ಕೂಡಲೇ ಎಲ್ಲಾ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಲೋಕಾಯುಕ್ತ ಪೊಲೀಸ್, ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ಪಿಡಿಒಗಳಿಂದ ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಿತ್ತು.

ಆದರೆ ನಂತರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. 2020ರ ಡಿಸೆಂಬರ್‌ನಲ್ಲಿ ಲೋಕಾಯುಕ್ತ ಹೆಚ್ಚುವರಿ ಮಹಾನಿರ್ದೇಶಕರ ಸೂಚನೆ ಮೇರೆಗೆ ಮತ್ತೆ ನೋಟಿಸ್ ಜಾರಿ ಮಾಡಲಾಗಿತ್ತು. ಆಗಲೂ ಈ ಕುರಿತಂತೆ ಯಾವುದೇ ವರದಿಗಳನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಲ್ಲಿಸಿರಲಿಲ್ಲ.

2021ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಪಿಡಿಒಗಳ ಸಮಾವೇಶದಲ್ಲಿ ‘ಅನವಶ್ಯಕ ಲೋಕಾಯುಕ್ತ ತನಿಖೆಯಿಂದ ಪಿಡಿಒಗಳನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕು’ ಎಂದು ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಒತ್ತಾಯಿಸಿದ್ದರು. 

ಕಳೆದ ಮಾರ್ಚ್ 28ರಂದು ರಾಜ್ಯ ಸರ್ಕಾರ ಪ್ರಕರಣವನ್ನು ಹಿಂದಕ್ಕೆ ಪಡೆದಿದೆ. ಇದಕ್ಕೆ ಕಾರಣ ನೀಡಿರುವ ಸರ್ಕಾರ, ಜಾಬ್‌ಕಾರ್ಡ್‌ಗಳು 10ರಿಂದ 15 ವರ್ಷ ಹಳೆಯದಾಗಿದ್ದು, ವ್ಯಕ್ತಿಗಳ ಮರಣ, ಮದುವೆ, ಜೀವನೋಪಾಯಕ್ಕಾಗಿ ವಲಸೆ ಹೋಗಿರುವ ಸಾಧ್ಯತೆ ಇರುವುದರಿಂದ ಪರಿಶೀಲನೆ ಸಾಧ್ಯವಿಲ್ಲ. ಬಹಳಷ್ಟು ಕಾಮಗಾರಿಗಳು ತಮ್ಮ ಮೂಲಸ್ವರೂಪ ಕಳೆದುಕೊಂಡಿವೆ. ಈ ಅವಧಿಯಲ್ಲಿ ಎಂಐಎಸ್ ವ್ಯವಸ್ಥೆ ಜಾರಿಯಲ್ಲಿರಲಿಲ್ಲ. ಕೂಲಿಕಾರರು ಹಿಂದಿನ ಘಟನೆಯನ್ನು ನೆನಪು ಮಾಡಿ ಹೇಳಲು ಸಾಧ್ಯವಿಲ್ಲ. ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳಲ್ಲಿ ಹೆಚ್ಚಿನವರು ನಿವೃತ್ತರಾಗಿದ್ದಾರೆ. ಹೀಗಾಗಿ ತನಿಖೆ ನಡೆಸುವುದು ಅಸಾಧ್ಯ’ ಎಂದು ಸರ್ಕಾರ ಕಾರಣ ನೀಡಿದೆ.

‘ಹಲವಾರು ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ಈ ಐದು ವರ್ಷಗಳ ಕಾಮಗಾರಿ ಪರಿಶೀಲನೆ ಸಾಧ್ಯವಾಗುವುದಿಲ್ಲ. 30 ಜಿಲ್ಲೆಗಳಲ್ಲಿ ಐದು ವರ್ಷ ನಡೆಸಲಾದ 9.85 ಲಕ್ಷ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಲು ಬಹಳ ಸಮಯ ಬೇಕಾಗುತ್ತದೆ’ ಎಂದು ಸರ್ಕಾರ ಪ್ರಕರಣ ವಾಪಾಸ್ ಪಡೆಯುತ್ತಿರುವುದಕ್ಕೆ ಕಾರಣ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.