ADVERTISEMENT

‘ಪ್ರಿಯ’ ಸಾಫ್ಟ್‌ವೇರ್‌ ತೊಡಕು; ಬಿಲ್‌ಗೆ ಕೊಕ್ಕೆ

ಗ್ರಾಮ ಪಂಚಾಯಿತಿಗಳಲ್ಲಿ14ನೇ ಹಣಕಾಸು ಯೋಜನೆ ಕಾಮಗಾರಿ

ಬಿ.ಜೆ.ಧನ್ಯಪ್ರಸಾದ್
Published 26 ಮೇ 2019, 20:04 IST
Last Updated 26 ಮೇ 2019, 20:04 IST
‘ಪ್ರಿಯ’ ತಂತ್ರಾಂಶ ಪುಟ
‘ಪ್ರಿಯ’ ತಂತ್ರಾಂಶ ಪುಟ   

ಚಿಕ್ಕಮಗಳೂರು: ‘ಪ್ರಿಯ’ (ಪಂಚಾಯತ್‌ರಾಜ್‌ ಇನ್‌ಸ್ಟಿಟ್ಯೂಷನ್ಸ್‌ ಅಕೌಂಟಿಂಗ್‌) ಸಾಫ್ಟ್‌ವೇರ್‌ ತೊಡಕಿನಿಂದಾಗಿ ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಯೋಜನೆ ಕಾಮಗಾರಿ ಬಿಲ್‌ಗಳು ನಾಲ್ಕೈದು ತಿಂಗಳಿನಿಂದ ಬಾಕಿ ಉಳಿದಿವೆ.

‘ಪ್ರಿಯ’ ಸಾಫ್ಟ್‌ವೇರ್‌ನ ಪಬ್ಲಿಕ್‌ ಫೈನಾನ್ಶಿಯಲ್‌ ಮಾನೇಜ್‌ಮೆಂಟ್‌ ಸಿಸ್ಟಂ (ಪಿಎಫ್‌ಎಂಎಸ್‌) ಪೋರ್ಟಲ್‌ನಲ್ಲಿ ಬ್ಯಾಂಕ್‌ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ತಾಳೆಯಾಗದಿರುವುದು, ಪೋರ್ಟಲ್‌ನಲ್ಲಿ ಕೆಲ ಬ್ಯಾಂಕ್‌ಗಳು ಸೇರ್ಪಡೆಯಾಗದಿರುವುದು, ವೆಚ್ಚ ವಿವರ ‘ಅಪ್ಡೇಟ್‌’ ಸಮಸ್ಯೆ ಮೊದಲಾದ ಕಾರಣಗಳಿಂದಗಿ ಬಿಲ್‌ಗಳು ಅನುಮೋದನೆಯಾಗಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿನ ಪೈಪ್‌ ಲೈನ್‌ ಅಳವಡಿಕೆ, ರಸ್ತೆ ಅಭಿವೃದ್ಧಿ ಮೊದಲಾದ ಕಾಮಗಾರಿ ನಿರ್ವಹಿಸಿದವರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ.

ಪಿಎಫ್‌ಎಂಎಸ್‌ ಪೋರ್ಟಲ್‌ನಲ್ಲಿ ರಾಜ್ಯದ 6,021 ಗ್ರಾಮ ಪಂಚಾಯಿತಿಗಳ ಪೈಕಿ 4,934 ನೋಂದಣಿಯಾಗಿದ್ದು, 1,087 ಪಂಚಾಯಿತಿಗಳು ಬಾಕಿ ಇವೆ. ಚಿಕ್ಕಮಗಳೂರು ಜಿಲ್ಲೆಯ227 ಪಂಚಾಯಿತಿಗಳ ಪೈಕಿ 54 ಬಾಕಿ ಇವೆ. ‘ಖಾತೆ ಬಳಕೆಯಲ್ಲಿಲ್ಲ’, ‘ವಿವರ ದೋಷ’, ‘ಅನುಮೋದನೆಯಾಗಿಲ್ಲ’ ಮೊದಲಾದ ಕಾರಣ ನೀಡಿ ನೋಂದಣಿ ತಿರಸ್ಕರಿಸಲಾಗಿದೆ.

ADVERTISEMENT

‘ಈ ಸಾಫ್ಟ್‌ವೇರ್‌ನಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಬಿಲ್‌ ಅನುಮೋದನೆ, ಪಾವತಿ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆ ನಿಟ್ಟಿನಲ್ಲಿ ಪಿಎಫ್‌ಎಂಎಸ್‌ ಪೋರ್ಟಲ್‌ನಲ್ಲಿ ಕಾಮಗಾರಿ ವೆಚ್ಚ, ಖಾತೆ ವಿವರ ಎಲ್ಲವನ್ನು ದಾಖಲಿಸಬೇಕು. ವಿಲೀನದಿಂದಾಗಿ ಕೆಲ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್‌ ಬದಲಾಗಿದೆ, ಖಾತೆ ಸಂಖ್ಯೆಗಳನ್ನು ಹೊಸದಾಗಿ ನೀಡಲಾಗಿದೆ. ಕೆಲ ಬ್ಯಾಂಕ್‌ಗಳು ಪೋರ್ಟಲ್‌ನಲ್ಲಿ ಸೇರ್ಪಡೆಯಾಗಿಲ್ಲ. ಇದು ಪ್ರಕ್ರಿಯೆಗೆ ತೊಡಕಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು 14ನೇ ಹಣಕಾಸು ಯೋಜನೆ ಕಾಮಗಾರಿ ಬಿಲ್‌ಗಳನ್ನು ‘ಗಾಂಧಿ ಸಾಕ್ಷಿ ಕಾಯಕ’ದಲ್ಲಿ ನಿರ್ವಹಸಲಾಗುತ್ತಿತ್ತು. ಮೊತ್ತವನ್ನು ಚೆಕ್‌ ಮೂಲಕ ಪಾವತಿಸಲಾಗುತ್ತಿತ್ತು. ಹೊಸ ವಿಧಾನದಲ್ಲಿ ದಾಖಲೆಗಳಿಂದ(ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ, ಜಿಯೊ ಟ್ಯಾಗ್‌, ಫೋಟೊ, ಬಜೆಟ್‌, ಏಜೆನ್ಸಿ...) ಕಾಮಗಾರಿ ಮೊತ್ತ ಪಾವತಿವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಮಾಡಬೇಕು. ಇದು ಸುದೀರ್ಘ ಪ್ರಕ್ರಿಯೆ’ ಎಂದು ಪಿಡಿಒವೊಬ್ಬರು ತಿಳಿಸಿದರು.

‘ನಮ್ಮ ಗ್ರಾಮ ಪಂಚಾಯಿತಿಯಲ್ಲಿ 14ನೇ ಹಣಕಾಸು ಯೋಜನೆಯ ₹ 75 ಲಕ್ಷ ಅನುದಾನ ಕೊಳೆಯುವಂತಾಗಿದೆ. ಬಿಲ್‌ ಬಾಕಿ ಸಮಸ್ಯೆಯಿಂದಾಗಿ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಮನಸ್ಸು ಮಾಡುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಕಳಸ ಗ್ರಾಮ ಪಂಚಾಯಿತಿ ಸದಸ್ಯ ಎನ್‌.ಬಿ.ಸಂತೋಷ್‌ ದೂರಿದರು.

**

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ತೊಡಕು ಎದುರಾಗಿದೆ. ‘ಪ್ರಿಯ’ ಸಾಫ್ಟ್‌ವೇರ್‌ ಹೊಸದಾಗಿ ಅಳವಡಿಸಲಾಗಿದೆ. ಆರಂಭದಲ್ಲಿ ಸಮಸ್ಯೆಗಳು ಸಾಮಾನ್ಯ. ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.
–ಎಸ್‌.ಅಶ್ವತಿ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಚಿಕ್ಕಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.