ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರು ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿವಿಧ ಸಚಿವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದ ನಂತರ, ಸಿದ್ದರಾಮಯ್ಯ ಭಾಷಣ ಆರಂಭಿಸಿದರು.
ಅದೇವೇಳೆ ಬಿಜೆಪಿ ಮಹಿಳಾ ಘಟಕದವರು ಕಪ್ಪು ಬಟ್ಟೆ ಪ್ರದರ್ಶಿಸಿ, ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಆಗ ಕಾರ್ಯಕ್ರಮ ಸ್ಥಳದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಸಿದ್ದರಾಮಯ್ಯ ಕೂಡ ಕೆಲಹೊತ್ತು ಭಾಷಣ ನಿಲ್ಲಿಸಿದರು.
ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ವೇದಿಕೆಗೆ ಕರೆಯಿಸಿ, ತರಾಟೆಗೆ ತೆಗೆದುಕೊಂಡ ಸಿ.ಎಂ, ‘ಯಾರ್‍ರೀ ಬೆಳಗಾವಿ ಎಸ್‌ಪಿ’ ಎಂದು ಏರು ಧ್ವನಿಯಲ್ಲಿ ಕೇಳಿದರು.
ಆಗ ಕಾಂಗ್ರೆಸ್‌ನ ನಾಯಕರು, ಬಿಜೆಪಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ನಂತರ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದರು.
ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಇಲಾಖೆ ವಾಹನಕ್ಕೂ ಕೆಲವರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪರಿಸ್ಥಿತಿ ಹತೋಟಿಗೆ ತರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.