ADVERTISEMENT

ಸಂವಿಧಾನ ವಿರೋಧಿ ಮೌನಿ ಪ್ರಧಾನಿ: ಬಿ.ಕೆ.ಚಂದ್ರಶೇಖರ್‌ ಟೀಕೆ

ಪ್ರಧಾನಮಂತ್ರಿ ಹುದ್ದೆಯ ಘನತೆಗೆ ಧಕ್ಕೆ: ಬಿ.ಕೆ.ಚಂದ್ರಶೇಖರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 19:30 IST
Last Updated 30 ಡಿಸೆಂಬರ್ 2021, 19:30 IST
ಪ್ರೊ.ಬಿ.ಕೆ.ಚಂದ್ರಶೇಖರ್
ಪ್ರೊ.ಬಿ.ಕೆ.ಚಂದ್ರಶೇಖರ್   

ಮೈಸೂರು: ‘ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಕೇಳಿ ಬಂದಿದ್ದ ದ್ವೇಷ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಬೇಕಿತ್ತು. ಆದರೆ ಅವರದ್ದು ಸಂವಿಧಾನ ವಿರೋಧಿ ಮೌನ’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ.ಚಂದ್ರಶೇಖರ್ ದೂರಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಹಿರಂಗವಾಗಿ ಮುಸ್ಲಿಮರನ್ನು ಕೊಲ್ಲುವಂತೆ ಧರ್ಮ ಸಂಸದ್‌ನಲ್ಲಿ ಆಹ್ವಾನ ನೀಡಿರುವ ಬಗ್ಗೆ ಮೋದಿ ಹಾಗೂ ಗೃಹ ಸಚಿವರು ಪ್ರತಿಕ್ರಿಯೆಯನ್ನೇ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಸ್ಲಿಮರ ವಿರುದ್ಧ ದ್ವೇಷ ಹರಡಲು ಸಂಘ ಪರಿವಾರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದಂತಾಗಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಹೇಳಿದರು.

‘ದೆಹಲಿಯಿದ ಐಎಎಫ್‌ ಹೆಲಿಕಾಪ್ಟರ್‌ನಲ್ಲಿ ಉತ್ತರ ಪ್ರದೇಶಕ್ಕೆ ಬಂದು ಪ್ರಧಾನಿ ರಾಜಕೀಯ ಭಾಷಣ ಮಾಡುತ್ತಾರೆ. ಜನರ ತೆರಿಗೆ ಹಣ ಬಳಸಿ ಜಾರಿಗೆ ತಂದ ಯೋಜನೆಗಳ ಉದ್ಘಾಟನೆ ವೇಳೆ ರಾಜಕೀಯ ಭಾಷಣ ಮಾಡುವ ಮೂಲಕ ಅವರು ತಮ್ಮ ಹುದ್ದೆಯ ಘನತೆಯನ್ನು ಕೆಡಿಸುವ, ಪ್ರಜಾಪ್ರಭುತ್ವದ ಬುನಾದಿಗೆ ಪೆಟ್ಟುಕೊಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಬಿಜೆಪಿ ನಡುವೆ ವ್ಯತ್ಯಾಸವಿಲ್ಲದಂತೆ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಪಕ್ಷದ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಪಂಚಾಯಿತಿ ಅಧಿಕಾರಿಗಳ ನೆರವು ಪಡೆಯಲಾಗುತ್ತಿದೆ. ಸರ್ಕಾರಿ ವಾಹನದಲ್ಲಿ ಪ್ರಯಾಣಿಸಿ, ರಾಜಕೀಯ ಭಾಷಣ ಮಾಡಿದರೆ ಪ್ರಶ್ನಿಸುವ ಅಧಿಕಾರವಿದ್ದರೂ ಚುನಾವಣಾ ಆಯೋಗವು ಸರ್ಕಾರದ ಇಲಾಖೆಯಂತೆ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

‘ಪ್ರಧಾನಿ ಅವರು ರೋಮ್‌ನಲ್ಲಿ ಪೋಪ್‌ ಭೇಟಿಯಾಗಿ ಮರಳಿದ ಹದಿನೈದು ದಿನಗಳಲ್ಲೇ ಇಡೀ ದೇಶದಲ್ಲಿ, ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕ್ರೈಸ್ತರು, ಚರ್ಚ್‌ಗಳ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಇದರ ಹಿಂದಿನ ಹುನ್ನಾರವೇನು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.