ADVERTISEMENT

ಕೋವಿಡ್‌ ಲಸಿಕೆ ವಿತರಣೆಗೆ ಸಜ್ಜಾಗಲು ಪ್ರಧಾನಿ ಮೋದಿ ಸೂಚನೆ

ಚುನಾವಣಾ ಬೂತ್‌ ಮಾದರಿಯಲ್ಲಿ ಕೇಂದ್ರಗಳ ಸ್ಥಾಪನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 10:06 IST
Last Updated 24 ನವೆಂಬರ್ 2020, 10:06 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ಕೋವಿಡ್‌ ಲಸಿಕೆ ವಿತರಣೆಗೆ ಸರ್ವ ರೀತಿಯಲ್ಲಿ ಸಜ್ಜಾಗಬೇಕು. ಚುನಾವಣೆ ಸಂದರ್ಭದಲ್ಲಿ ಬೂತ್‌ಗಳನ್ನು ತಯಾರಿ ಮಾಡಿಕೊಳ್ಳುವಂತೆ, ಲಸಿಕೆ ವಿತರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ಪ್ರಧಾನಿಯವರ ಸಭೆಯ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಲಸಿಕೆ ಮುಂದಿನ ವರ್ಷ ಯಾವುದೇ ಹಂತದಲ್ಲಿ ಬಂದರೂ ಅದರ ಸಮರ್ಪಕ ವಿತರಣೆಗೆ ಸರ್ವ ರೀತಿಯಲ್ಲಿ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. 30 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಕೊರೊನಾ ವಾರಿಯರ್ಸ್‌ಗಳಿಗೆ ಮತ್ತು 50 ವರ್ಷ ವಯಸ್ಸು ದಾಟಿದ 26 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ADVERTISEMENT

ರಾಜ್ಯ ಮಟ್ಟದಲ್ಲಿ ತಕ್ಷಣವೇ ಸಂಚಾಲನ ಸಮಿತಿ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಬೇಕು. ಬ್ಲಾಕ್‌ ಮಟ್ಟದಲ್ಲೂ ವ್ಯವಸ್ಥೆ ಮಾಡಬೇಕು. ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂ ಸೇವಕರಿಗೆ ತರಬೇತಿ ನೀಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು. 2 ರಿಂದ 3 ಡೋಸ್‌ ನೀಡಬೇಕಾಗಬಹುದು. ಲಸಿಕೆ ನೀಡಿಕೆಯ ಮಾಹಿತಿಯನ್ನು ಡಿಜಿಟಲ್‌ ವೇದಿಕೆಯಲ್ಲಿ ಸಂಗ್ರಹಿಸಿಡಲಾಗುವುದು ಎಂದೂ ತಿಳಿಸಿದ್ದಾರೆ ಎಂದರು.

ಕೋವಿಡ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಶೇ 1 ಕ್ಕಿಂತಲೂ ಕಡಿಮೆ ಇರುವಂತೆ ಮತ್ತು ಪಾಸಿಟಿವ್‌ ಸಂಖ್ಯೆ ಶೇ 5 ಮೀರಬಾರದು. ಇದಕ್ಕಾಗಿ ಹೆಚ್ಚಿನ ಸಂಖ್ಯೆಯನ್ನು ಪರೀಕ್ಷೆಗಳನ್ನು ಕೈಗೊಳ್ಳಬೇಕು. ಲಸಿಕೆ ನೀಡಿದರೂ ಚಿಕಿತ್ಸೆ ಮುಂದುವರಿಯುತ್ತದೆ. ದೇಶದಲ್ಲಿ ಎರಡನೇ ಅಲೆ ಆರಂಭವಾಗಿರುವುದರಿಂದ ಜನ ಮೈಮರೆಯಬಾರದು ಎಂದು ಎಚ್ಚರಿಕೆ ನೀಡಿದರು.

ಜಗತ್ತಿನ ಹಲವೆಡೆ ಲಸಿಕೆ ತಯಾರಿಕೆ ವಿವಿಧ ಹಂತಗಳಲ್ಲಿವೆ. 50 ಕ್ಲಿನಿಕಲ್ ರೀಸರ್ಚ್‌ನಲ್ಲಿದ್ದು, 25 ಮುಂದುವರಿದ ಟ್ರಯಲ್‌ನಲ್ಲಿವೆ. ಭಾರತದಲ್ಲೇ 5 ಲಸಿಕೆಗಳ ಕ್ಲಿನಿಕಲ್‌ ಟ್ರಯಲ್‌ ನಡೆದಿವೆ. ದೇಶದಲ್ಲಿ 25 ಕಂಪನಿಗಳು ಲಸಿಕೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.