ಸಿಇಟಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲು ಕರ್ನಾಟಕ ರಾಜ್ಯ ಖಾಸಗಿ ವಿಶ್ವವಿದ್ಯಾಲಯಗಳ ಸಂಘ ನಿರ್ಧರಿಸಿದೆ.
ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆಗಳು ಆಯಾ ಆಡಳಿತ ಮಂಡಳಿಗಳ ನಿರ್ಧಾರದಂತೆ ನಡೆಯುತ್ತಿವೆ. ಇದರಿಂದ ಪ್ರವೇಶ ಬಯಸುವ ವಿದ್ಯಾರ್ಥಿಗಳು ಹಲವು ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಹೊರೆ ತಪ್ಪಿಸಲು ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳೂ ಸೇರಿ ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಈಚೆಗೆ ಉನ್ನತ ಶಿಕ್ಷಣ ಇಲಾಖೆ ಪತ್ರ ಬರೆದು, ಜೂನ್ 30ರ ಒಳಗೆ ಜಾಲತಾಣದಲ್ಲಿ ಪ್ರಕಟಿಸುವಂತೆ ಸೂಚಿಸಿತ್ತು.
‘ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಮೊದಲಿನಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ–ಸಿಇಟಿ ಮೂಲಕ ಹಾಗೂ ಶೇ 60 ಸೀಟುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳುವುದು ಅಥವಾ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಮಾದರಿಯಲ್ಲಿ ಸೀಟುಗಳನ್ನು ಹಂಚಿಕೆ ಮಾಡುವ ಕುರಿತು ಸಂಘದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಸಂಘದ ಸಂಚಾಲಕ ನಾಗರಾಜ್ ಹೇಳಿದ್ದಾರೆ.
ರಾಜ್ಯದಲ್ಲಿ 31 ಖಾಸಗಿ ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ 20 ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಕೋರ್ಸ್‌ಗಳಿವೆ. ಸಾಮಾನ್ಯ ಪ್ರವೇಶ ಪ್ರಕ್ರಿಯೆ ನಡೆಸುವ ಕುರಿತು ಅಂತಿಮ ರೂಪುರೇಷೆ ಸಿದ್ಧಪಡಿಸಲು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.