
ಬೆಂಗಳೂರು: ‘ಟಿಕೆಟ್, ಅಧಿಕಾರ ಬೇಕು ಎಂದಾಗ ಪಕ್ಷ ಬೇಕು. ಅಧಿಕಾರ ಅನುಭವಿಸಿದಾಗ, ಅನುಭವಿಸುತ್ತಿರುವಾಗ ಪಕ್ಷ ಬೇಡವೇ? ಯಾರೊ ಒಬ್ಬರಿಂದ ಪಕ್ಷ ಅಲ್ಲ, ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಸಿದ್ದರಾಮಯ್ಯ ಇದ್ದರೆ ಕಾಂಗ್ರೆಸ್’ ಎಂಬ ಕೆ.ಎನ್. ರಾಜಣ್ಣ ಹೇಳಿಕೆ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಮುಂದಿನ ಪೀಳಿಗೆಗೆ ನಾಯಕತ್ವವನ್ನು ಬೆಳೆಸುತ್ತಾ ಹೋಗಬೇಕು. ನನ್ನಿಂದಲೇ ಪಕ್ಷ ಎಂದು ಅಂದುಕೊಂಡಿದ್ದರೆ, ಅದು ಭ್ರಮೆ. ನಾವೆಲ್ಲರೂ ಕಾರ್ಯಕರ್ತರಿಂದಲೇ ಇದ್ದೇವೆ. ಕಾರ್ಯಕರ್ತರು ಇಲ್ಲದಿದ್ದರೆ ನನ್ನ ನಾಯಕತ್ವವೂ ಇರುವುದಿಲ್ಲ’ ಎಂದರು.
‘ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಅವರೇ ಸ್ಪಷ್ಟನೆ ಕೊಟ್ಟಮೇಲೆ ನಮ್ಮನ್ನು ಕೇಳಿ ಏನು ಪ್ರಯೋಜನ? ಮುಂದೆ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.
‘ಎಲ್ಲ ಸಮುದಾಯಗಳನ್ನ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್. ನಾಯಕತ್ವ, ಪ್ರಗತಿ ಎರಡೂ ನಿಂತ ನೀರಲ್ಲ. ಹಿಂದೆ ದೇವರಾಜ ಅರಸು ಇದ್ದರು, ಈಗ ಸಿದ್ದರಾಮಯ್ಯ ಇಲ್ಲವೇ? ನೆಹರೂ, ಗಾಂಧಿ ತತ್ವವನ್ನು ರಾಹುಲ್ ಗಾಂಧಿ ಮುಂದುವರಿಸುತ್ತಿದ್ದಾರಲ್ಲವೇ?’ ಎಂದರು.
ಆರ್‌ಎಸ್‌ಎಸ್ ವಿರುದ್ಧದ ಹೇಳಿಕೆಗೆ ನೋಟಿಸ್ ಜಾರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಆರ್‌ಎಸ್‌ಎಸ್‌ನವರ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ಆರ್‌ಎಸ್‌ಎಸ್ ಇನ್ನೂ ಏಕೆ ನೋಂದಣಿ ಮಾಡಿಸಿಕೊಂಡಿಲ್ಲ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಕೇಂದ್ರ ಗೃಹ ಸಚಿವರಿಗೆ ಸಮಾನ ಭದ್ರತೆ ಯಾಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.