ADVERTISEMENT

ಯುವತಿಯರ ಕುರಿತು ಪ್ರಿಯಾಂಕ್‌ ಖರ್ಗೆ ಹೇಳಿಕೆ ಖಂಡನೀಯ: ನಳೀನ್‌ ಕುಮಾರ್‌ ಕಟೀಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2022, 8:15 IST
Last Updated 13 ಆಗಸ್ಟ್ 2022, 8:15 IST
ನಳೀನ್‌ ಕುಮಾರ್‌ ಕಟೀಲ್
ನಳೀನ್‌ ಕುಮಾರ್‌ ಕಟೀಲ್   

ಬೆಂಗಳೂರು: ‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ’ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ವ್ಯಕ್ತಿಯ ಯೋಚನೆಯಂತೆ ಅವರ ಮಾತುಗಳು ಇರುತ್ತವೆ ಎನ್ನುವುದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಹೇಳಿಕೆಯಿಂದ ಸಾಬೀತಾಗಿದೆ. ಈ ದೇಶದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿ ಅವರು ತಮ್ಮ ಮಟ್ಟ ತೋರಿಸಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

‘ಸ್ವಾಭಿಮಾನಿ ಮಾತೆಯರನ್ನು, ಶ್ರಮಜೀವಿ ಯುವಕರನ್ನು ಗೌರವಿಸುವುದು ಈ ನೆಲದ ಸಂಸ್ಕೃತಿ. ಖರ್ಗೆ ಹೇಳಿಕೆ ಖಂಡನೀಯ’ ಎಂದೂ ನಳೀನ್‌ ಹೇಳಿದ್ದಾರೆ.

ADVERTISEMENT

ಕಲಬುರಗಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಖರ್ಗೆ, ‘ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ಯುವತಿಯರಿಗೆ ಉದ್ಯೋಗ ಬೇಕಾದರೆ ಮಂಚ ಹತ್ತಬೇಕು. ಯುವಕರಿಗೆ ಉದ್ಯೋಗ ಬೇಕಾದರೆ ಲಂಚ ಕೊಡಬೇಕು ಎನ್ನುವಂತಾಗಿದ್ದು ಇದೊಂದು‌ ಲಂಚ–ಮಂಚದ ಸರ್ಕಾರವಾಗಿದೆ. ಯುವತಿಯ ಕೆಲಸ ಮಾಡಿಸಿಕೊಡಲು ಮಂಚ ಹತ್ತಲು ಸಚಿವರೊಬ್ಬರು ಹೇಳಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಅವರು ರಾಜೀನಾಮೆ ನೀಡಿದ್ದೇ ನನ್ನ ಮಾತಿಗೆ ಸಾಕ್ಷಿಯಾಗಿದೆ’ ಎಂದರು.

‘ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಸಿವಿಲ್ ಎಂಜಿನಿಯರ್ ಸೇರಿದಂತೆ ಒಟ್ಟು 1492 ಹುದ್ದೆಗಳಿಗೆ ನೇಮಕಾತಿ ನಡೆಸಿದೆ. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಗೋಕಾಕನಲ್ಲಿ ಬಂಧನಕ್ಕೊಳಗಾಗಿದ್ದಾನೆ. ನನಗಿರುವ ಮಾಹಿತಿಯ ಪ್ರಕಾರ ಒಟ್ಟು 600 ಹುದ್ದೆಗಳಿಗೆ ಡೀಲ್‌ ನಡೆದಿರುವ ಸಾಧ್ಯತೆ ಇದೆ. ಎಇ ಹುದ್ದೆಗೆ ₹ 50 ಲಕ್ಷ, ಜೆಇ ಹುದ್ದೆಗೆ ₹ 30 ಲಕ್ಷದವರೆಗೆ ಹಣ ಪಡೆದಿರುವ ಶಂಕೆ ಇದೆ. ಇದೊಂದರಲ್ಲೇ ₹ 300 ಕೋಟಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೇ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.