
ಕಲಬುರಗಿ: ‘ಮತದಾರರನ್ನು ಬಿಹಾರದಿಂದ ಕರೆಸುತ್ತಾರೆಯೇ? ರಾಜಕೀಯದಲ್ಲಿ ಗೆಲುವು–ಸೋಲು ಸಾಮಾನ್ಯ. ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಇಷ್ಟೊಂದು ಆಡಳಿತ ವಿರೋಧಿ ಅಲೆ ಇದ್ದಾಗಲೂ ಅವರು ಪಡೆದ ಮತಪ್ರಮಾಣದ ಬಗ್ಗೆ ಅನುಮಾನವಿದೆ. ದತ್ತಾಂಶ ಹೊರಗೆ ಬರಲಿ ನೋಡೋಣ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ‘ಬಿಹಾರ ಫಲಿತಾಂಶ ಕರ್ನಾಟಕದಲ್ಲಿಯೂ ಪರಿಣಾಮ ಬೀರಲಿದೆಯಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರಿಯಾಂಕ್ ಈ ರೀತಿ ಉತ್ತರಿಸಿದರು.
‘ಇಲ್ಲೇ ಆಳಂದ ಹಾಗೂ ಮಹದೇವಪುರದಲ್ಲಿ ಏನು ನಡೆದಿದೆ ಎನ್ನುವುದನ್ನು ದಾಖಲೆ ಸಮೇತ ಕೊಡುತ್ತೇವೆ. ಚುನಾವಣೆ ಆಯೋಗದ ಪಾತ್ರ ಏನಿದೆ ಎಂದು ಗೊತ್ತಾಗಲಿದೆ. ಬಿಹಾರದಲ್ಲಿ ಚುನಾವಣೆಗೆ ಮುನ್ನ ಮಹಿಳೆಯರಿಗೆ ಹಣ ಬಿಡುಗಡೆ ಮಾಡಲು ಅಡ್ಡಿ ಮಾಡದ ಚುನಾವಣೆ ಆಯೋಗ ತೆಲಂಗಾಣದಲ್ಲಿ ಅಡ್ಡಿ ಮಾಡಿತು’ ಎಂದು ಆರೋಪಿಸಿದರು.
ಸಿಎಂ ಹೇಳಿಕೆ ಅಂತಿಮ: ‘ಮುಖ್ಯಮಂತ್ರಿ ಅವರು ಸಂಪುಟ ವಿಸ್ತರಣೆ ಕುರಿತಂತೆ ಏನು ಹೇಳಿದ್ದಾರೆ ಅದೇ ಅಂತಿಮ. ಇದೆಲ್ಲ ಮಾಧ್ಯಮದ ವಲಯಲ್ಲಿ ಚರ್ಚೆ ನಡೆದಿದೆ ಎಂದು ಅವರೇ ಹೇಳಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಿಎಂ ಅವರು ಕಬ್ಬು ಬೆಳೆಗಾರರು, ಜಲಜೀವನ್ ಮಿಷನ್ ಸೇರಿ 4–5 ವಿಚಾರ ಚರ್ಚೆ ನಡೆಸಲಿದ್ದಾರೆ. ಹಾಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮಾಹಿತಿ ನೀಡಲಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.