ADVERTISEMENT

‘ಚಕ್ರತೀರ್ಥ ಕಿತ್ತು ಹಾಕಿ ಮಕ್ಕಳ ಭವಿಷ್ಯ ಕಾಪಾಡಿ’: ಸರ್ಕಾರಕ್ಕೆ ಖರ್ಗೆ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2022, 9:29 IST
Last Updated 23 ಮೇ 2022, 9:29 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರವೀಗ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ರಾಜಕೀಯ ಪಕ್ಷಗಳ ನಡುವೆ ವಾದ–ಪ್ರತಿವಾದಗಳು ನಡೆಯುತ್ತಿವೆ.

ಪಠ್ಯಪುಸ್ತಕ ಪರಿಷ್ಕರಣೆಗೆ ಅನರ್ಹ ಸಮಿತಿ ರಚಿಸಿ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಇದರ ಬೆನ್ನಲ್ಲೇ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥರ ಹಳೆಯ ಫೇಸ್‌ಬುಕ್‌ ಪೋಸ್ಟ್‌ಗಳು ವೈರಲ್‌ ಆಗುತ್ತಿವೆ.

ADVERTISEMENT

ಚಕ್ರತೀರ್ಥರ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ‘ಕೂಡಲೇ ಈತನನ್ನು(ರೋಹಿತ್‌ ಚಕ್ರತೀರ್ಥ) ಕಿತ್ತೆಸೆದು ಮಕ್ಕಳ ಭವಿಷ್ಯ ಕಾಪಾಡಬೇಕು’ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಶಿಕ್ಷಣ ತಜ್ಞರು, ವಿದ್ವಾಂಸರು ಇರಬೇಕಾದ ಪಠ್ಯ ಪುಸ್ತಕ ಸಮಿತಿಗೆ ₹2 ಟ್ರೋಲ್‌ಗಳು, ಬಿಜೆಪಿಯ ಬಾಡಿಗೆ ಭಾಷಣಕಾರರನ್ನು ಕೂರಿಸಿ ಮಕ್ಕಳಿಗೆ ಸುಳ್ಳಿನ ಶೂರರ ಪಾಠ ಹೇಳಿಸುವುದು ವಿಪರ್ಯಾಸ’ ಎಂದು ಖರ್ಗೆ ಹರಿಹಾಯ್ದಿದ್ದಾರೆ.

‘ನಾಡು, ನುಡಿಗೆ, ಕುವೆಂಪುರಂತಹವರಿಗೆ ಅವಮಾನಿಸಿದ ಈತನ ಟ್ರೋಲ್‌ ಪಾಂಡಿತ್ಯವೇ ಅರ್ಹತೆಯೇ? ಕೂಡಲೇ ಈತನನ್ನು ಕಿತ್ತೆಸೆದು ಮಕ್ಕಳ ಭವಿಷ್ಯವನ್ನು ಸರ್ಕಾರ ಕಾಪಾಡಬೇಕು’ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.