ADVERTISEMENT

ಮಲ್ಲಿಕಾರ್ಜುನ ಖರ್ಗೆ ಅಧಿಕಾರಕ್ಕಾಗಿ ಕಣ್ಣೀರು ಹಾಕಿದವರಲ್ಲ: ಸಚಿವ ಪ್ರಿಯಾಂಕ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 8:10 IST
Last Updated 29 ಜುಲೈ 2025, 8:10 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಕಲಬುರಗಿ: ‘ಮಲ್ಲಿಕಾರ್ಜುನ ಖರ್ಗೆ ಅವರು ಎಂದಿಗೂ ರಾಜಕೀಯ ಹುದ್ದೆಗಳಿಗೆ ಕಣ್ಣೀರು ಹಾಕಿದವರಲ್ಲ; ಹಾಕುವವರೂ ಅಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಸಿ.ಎಂ. ಹುದ್ದೆ ಸಿಗದಿರುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ನಗರದಲ್ಲಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

‘ವಿಜಯೇಂದ್ರ ಅವರ ಪೂಜ್ಯ ತಂದೆ ಯಾಕೆ ಅಸಹಾಯಕರಾಗಿ ವೇದಿಕೆಯಲ್ಲಿ ಕಣ್ಣೀರು ಹಾಕಿದರು ಎಂಬುದನ್ನು ಮೊದಲು ಹೇಳಲಿ. ಅವರ ತಂದೆ ಮುಖ್ಯಮಂತ್ರಿ ಆದಾಗೆಲ್ಲವೂ ಕಣ್ಣೀರು ಹಾಕಿದ್ದಾರೆ. ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಲೇ ಒಮ್ಮೆ ಮುಖ್ಯಮಂತ್ರಿ ಆದರು. ಎರಡನೇ ಸಲವೂ ದೆಹಲಿಗೆ ಅಳುತ್ತ ಹೋಗಿ ಮುಖ್ಯಮಂತ್ರಿ ಆದರು. ಇತ್ತೀಚೆಗೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಬೇಕಾದರೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಪೂಜ್ಯಅಪ್ಪಾಜಿ ಅವರನ್ನು ಕಣ್ಣೀರು ಹಾಕಿಸಿ ಇಳಿಸಿದರಲ್ಲ ಅದರ ಬಗ್ಗೆ ವಿಜಯೇಂದ್ರ ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ADVERTISEMENT

ಸಾಕ್ಷ್ಯ ಸಿಕ್ಕರೆ ಖಚಿತ ಕ್ರಮ:

‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ. ಹೊಸ ಸಾಕ್ಷ್ಯಗಳ ಸಿಕ್ಕರೆ, ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ನಮ್ಮ ಸರ್ಕಾರ ಕಾನೂನು ಬದ್ಧವಾಗಿ ಕ್ರಮಕೈಗೊಳ್ಳಲಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಕೇರಳದ ಪ್ರಭಾವದಿಂದ ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿದೆ‘ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌, ‘ಆರ್‌.ಅಶೋಕ ಅವರು ಗೃಹ ಸಚಿವರಾಗಿದ್ದರು. ಅವರಿಗೆ ಕಾನೂನು, ಸಂವಿಧಾನ ಗೊತ್ತಿಲ್ಲವೇ? ನಮ್ಮ ಸರ್ಕಾರ ಕೇರಳದವರು ಹೇಳಿದಂತೆಯಲ್ಲ ಮಾಡಿದೆ ಎನ್ನುವುದಾದರೆ, ಬಿಜೆಪಿ ಸರ್ಕಾರ ಇದ್ದಾಗ ತನಿಖೆ ನಡೆಸದಿರಲು ಅವರ ಮೇಲೆ ಏನು ಒತ್ತಡವಿತ್ತು’ ಎಂದು ಪ್ರಶ್ನಿಸಿದರು.

‘ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿಯುತವಾಗಿ, ತರ್ಕಬದ್ಧವಾಗಿ ಮಾತನಾಡಿದರೆ, ಪ್ರತಿಕ್ರಿಯಿಸಬಹುದು. ಆದರೆ, ಬಾಲಿಶ ಹೇಳಿಕೆ ನೀಡಿದರೆ ಪ್ರತಿಕ್ರಿಯಿಸಲಾಗದು’ ಎಂದು ಸಚಿವ ಪ್ರಿಯಾಂಕ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.