ADVERTISEMENT

ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ: ಸಚಿವ ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 16:05 IST
Last Updated 14 ಏಪ್ರಿಲ್ 2025, 16:05 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೂಲಕ ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಇದಕ್ಕಾಗಿ ಗ್ರಾಮಪಂಚಾಯಿತಿಗಳನ್ನು ಸಜ್ಜುಗೊಳಿಸಲಾಗಿದೆ. ರಾಜ್ಯದಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಆದ್ದರಿಂದ ಬೇಸಿಗೆ ರಜೆ ಕೊನೆಗೊಳ್ಳುವವರೆಗೆ ಅಂದರೆ ಮೇ ವರೆಗೆ ಶಿಬಿರಗಳನ್ನು ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಲ್ಲಿ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ನಡೆಸಲಾಗುವುದು. ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಪುನರ್ವಸತಿ ಕಾರ್ಯಕರ್ತರು ಮತ್ತು ಸ್ವಯಂ ಸೇವಕರನ್ನು ಇದಕ್ಕೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ADVERTISEMENT

ಹದಿನೈದು ದಿನಗಳ ಶಿಬಿರವನ್ನು ಆಯೋಜಿಸುವ ಮೂಲಕ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡಲಾಗುತ್ತದೆ. ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಪೇಪರ್‌ ಫ್ಯಾನ್‌, ಜೆಟ್‌ ಪ್ಲೇನ್‌, ಕಣ್ಣು ಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

‘ಯೋಜನಾ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುವುದು. ಮುಖ್ಯವಾಗಿ, ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜನಪದ ಗೀತೆಗಳು–ಜನಪದ ಕಥೆ, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸ್ಥಳೀಯ ಅಂಚೆ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್‌, ಪಶು ವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ, ಆಸ್ಪತ್ರೆ ಮುಂತಾದ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ದು ಪರಿಚಯ ಮಾಡಿಸಲಾಗುವುದು’ ಎಂದೂ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.