ADVERTISEMENT

ಪ್ರೊ.ಬಿಳಿಮಲೆ ಭಾಗವಹಿಸುವುದಕ್ಕೆ ಆಕ್ಷೇಪ: ತುಳು ಗೋಷ್ಠಿ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 16:42 IST
Last Updated 1 ನವೆಂಬರ್ 2020, 16:42 IST
ಪ್ರೊ.ಬಿಳಿಮಲೆ
ಪ್ರೊ.ಬಿಳಿಮಲೆ   

ಮಂಗಳೂರು:ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಭಾಗವಹಿಸುತ್ತಿರುವುದಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ನಗರದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ತುಳು ಗೋಷ್ಠಿ’ಯನ್ನು ಮುಂದೂಡಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

‘ಬಿಳಿಮಲೆ ಅವರು ಭಾಗವಹಿಸಬಾರದು. ಅದಕ್ಕಾಗಿ ನೀವು ಕಾರ್ಯಕ್ರಮ ರದ್ದುಗೊಳಿಸಿ’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಟ್ರೂ ಕಾಲರ್‌ನಲ್ಲಿ ‘ರವಿಚಂದ್ರ’ ಎಂದು ಹೆಸರು ಬಂದಿತ್ತು. ಸ್ವಲ್ಪ ಸಮಯದ ಬಳಿಕ ತುಳು ಪೀಠದ ಪ್ರಾಧ್ಯಾಪಕರೊಬ್ಬರು, ‘ಗೋಷ್ಠಿ ಮುಂದೂಡಲಾಗಿದೆ’ ಎಂದು ಸಂದೇಶ ಕಳುಹಿಸಿದರು. ನಿಜಕ್ಕೂ ದಿಗ್ಭ್ರಮೆ ಉಂಟಾಯಿತು’ ಎಂದು ಆಯೋಜಕ ತುಳು ವರ್ಲ್ಡ್‌ ಅಧ್ಯಕ್ಷ ಡಾ.ರಾಜೇಶ್‌ಕೃಷ್ಣ ಆಳ್ವ ‘ಪ್ರಜಾವಾಣಿ’ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ‘ಈ ಬೆಳವಣಿಗೆಗಳು ನನಗೆ ಗೊತ್ತಿಲ್ಲ. ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ ಎಂದು ಪ್ರಾಧ್ಯಾಪಕರು ತಿಳಿಸಿದ್ದರು. ಬೆಂಗಳೂರಿನಿಂದ ವಾಪಸ್ ಬಂದ ತಕ್ಷಣವೇ ಪರಿಶೀಲಿಸುತ್ತೇನೆ. ಮುಂದೂಡಿದ್ದರೆ ಮತ್ತೆ ಆಯೋಜಿಸುತ್ತಾರೆ’ ಎಂದರು.

ADVERTISEMENT

‘ನನ್ನ ಭಾಷಣದ ಆಡಿಯೊವನ್ನು 15 ದಿನಗಳ ಹಿಂದೆಯೇ ಕಳುಹಿಸಿದ್ದೇನೆ. ಸಿಂಡಿಕೇಟ್‌ ಸದಸ್ಯರೊಬ್ಬರ ಕರೆಯಂತೆ ಒಂದು ವಿಭಾಗವು ಕಾರ್ಯಕ್ರಮ ರದ್ದು ಮಾಡುವುದು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುತ್ತದೆ. ಈಗ ನಡೆದಿರುವುದು ಅಪ್ರಜಾಸತ್ತಾತ್ಮಕ ಹಾಗೂ ಅನೈತಿಕ. ‘ಸಿಂಡಿಕೇಟ್‌’ ಘನತೆಗೂ ಚ್ಯುತಿ ತರುತ್ತದೆ’ ಎಂದು ಪ್ರೊ.ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.