ADVERTISEMENT

ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಸಿದ್ದರಾಮಯ್ಯ-ಚೀನಾ ಪರ ಸೆಮಿನಾರ್ ರದ್ದು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 16:16 IST
Last Updated 27 ಆಗಸ್ಟ್ 2022, 16:16 IST
   

ಬೆಂಗಳೂರು: ಭಾರತ– ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ‘ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಬಂಡವಾಳಶಾಹಿಗಳ ಹಸ್ತಕ್ಷೇಪ’ ಕುರಿತ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನಿರಾಕರಿಸಿದ್ದರಿಂದ ಕಾರ್ಯಕ್ರಮವೇ ರದ್ದಾಯಿತು.

ಚೀನಾ ಪರವಾದ ವಿಚಾರ ಸಂಕಿರಣದಲ್ಲಿ ಕಾಂಗ್ರೆಸ್‌ ನಾಯಕರನ್ನು ಅತಿಥಿಗಳನ್ನಾಗಿ ಆಹ್ವಾನಿಸಿದ್ದ ವಿಚಾರ ಬಿಜೆಪಿ– ಕಾಂಗ್ರೆಸ್‌ ನಾಯಕರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ವಾದಕ್ಕೂ ಕಾರಣವಾಯಿತು. ‘ಕಾಂಗ್ರೆಸ್‌ ಚೀನಾ ಪರವಾಗಿದೆ’ ಎಂದು ಬಿಜೆಪಿ ಮುಖಂಡರು ಆಪಾದಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಚಾರ ಸದ್ದು ಮಾಡುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿರಲಿಲ್ಲ. ಆದರೂ, ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹೇಗೆ ಪ್ರಕಟವಾಗಿದೆ ತಿಳಿದಿಲ್ಲ. ನಮ್ಮ ಪಕ್ಷ ಮತ್ತು ನಾನು ಈ ಕಾರ್ಯಕ್ರಮದ ಕಾರ್ಯಸೂಚಿಗೆ ವಿರುದ್ಧವಾಗಿದ್ದೇವೆ. ಈ ಕಾರಣದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ ಬಳಿಕವೇ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು’ ಎಂದು ಭಾರತ– ಚೀನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌ ಕರ್ನಾಟಕ ಘಟಕದ ಅಧ್ಯಕ್ಷರಾಗಿರುವ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿದರು.

ಚೀನಾ ರಾಯಭಾರಿ ಸುನ್‌ ವೀಡಾಂಗ್‌ ಮತ್ತು ಕಾನ್ಸುಲ್‌ ಜನರಲ್‌ ಕಾಂಗ್‌ ಕ್ಸಿನ್ಹುವಾ ಈ ಕಾರ್ಯಕ್ರಮದ ಇತರ ಮುಖ್ಯ ಅತಿಥಿಗಳಾಗಿದ್ದರು. ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾದ ಡಾ.ಎಲ್‌. ಹನುಮಂತಯ್ಯ, ಮುಖಂಡರಾದ ಡಾ.ಎಚ್‌.ಸಿ. ಮಹದೇವಪ್ಪ, ಪಿ.ಜಿ.ಆರ್‌. ಸಿಂಧ್ಯ ಕೂಡ ಅತಿಥಿಗಳ ಪಟ್ಟಿಯಲ್ಲಿದ್ದರು.

‘ಚೀನಾ ಛಾಯಾಚಿತ್ರಗಳ ಪ್ರದರ್ಶನ ಮಾತ್ರ ನಿಗದಿಯಾಗಿತ್ತು. ವಿಚಾರ ಸಂಕಿರಣ ಇರಲಿಲ್ಲ’ ಎಂದು ಅಸೋಸಿಯೇಷನ್‌ ಹೇಳಿದೆ.

ಬಿಜೆಪಿ ವಾಗ್ದಾಳಿ: ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ ಚೀನಾ ಪರವಾಗಿಕಾಂಗ್ರೆಸ್‌ ಕೆಲಸ ಮಾಡುತ್ತದೆಯೇ ಎಂಬ ಸಂಶಯವನ್ನು ಈ ಕಾರ್ಯಕ್ರಮ ನಿರೂಪಿಸುತ್ತದೆ. ಅಮೆರಿಕವು ಚೀನಾದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿದರೆ ಕಾಂಗ್ರೆಸ್‌ ಏಕೆ ಚೀನಾ ಪರ ನಿಲ್ಲಬೇಕು’ ಎಂದು ಪ್ರಶ್ನಿಸಿದ್ದಾರೆ.

‌‘ಕಾಂಗ್ರೆಸ್‌ ಪಕ್ಷ ಚೀನಾ ಏಜೆಂಟ್‌. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚೀನಾ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದ ಫೋಟೊವನ್ನು ನೋಡಿದ್ದೆವು. ಆದರೆ, ಇದು ಹೊಸತು. ಕಾಂಗ್ರೆಸ್‌ ಏಕೆ ಯಾವಾಗಲೂ ಭಾರತದ ಸೇನೆಯನ್ನು ವಿರೋಧಿಸುತ್ತದೆ ಮತ್ತು ದೇಶದ್ರೋಹಿ ಶಕ್ತಿಗಳನ್ನು ಬೆಂಬಲಿಸುತ್ತದೆ ಎಂಬುದಕ್ಕೆ ಇದು ಉತ್ತರ’ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಜಿಂದರ್‌ ಬಗ್ಗಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.