ಬೆಳಗಾವಿ: ‘ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶಗಳು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವಾಗಿದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿಭಾಗದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ’ಎಂದು ಜಿಲ್ಲೆಯ ವಿವಿಧ ಕನ್ನಡ ಪರ ಹೋರಾಟಗಾರರು, ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯವರೇ ಇದಕ್ಕೆ ಸರಿಯಾಗಿ ಉತ್ತರ ನೀಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
‘ಅವರು (ಶಿವಸೇನೆ) ಗಡಿ ವಿಷಯವನ್ನೇ ಇಟ್ಟುಕೊಂಡೇ ಇಷ್ಟು ವರ್ಷಗಳ ಕಾಲ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಗಡಿಯ ಕ್ಯಾತೆಯನ್ನು ತೆಗೆಯುತ್ತಾರೆ ಎನ್ನುವುದನ್ನು ನಾವು ಮೊದಲೇ ಅಂದಾಜಿಸಿದ್ದೇವು. ಅದರಂತೆ ಅವರು ಕೆಣಕಿದ್ದಾರೆ. ಈಗ ನಾವು ಹೇಳಿಕೆ ನೀಡಿದರೆ ಸಾಲದು, ಮುಖ್ಯಮಂತ್ರಿ ಅವರಿಗೆ ಮುಖ್ಯಮಂತ್ರಿಯವರೇ ಪ್ರತಿಕ್ರಿಯೆ ನೀಡಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎಚ್.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಆ ನಂತರ ಸಮ್ಮಿಶ್ರ ಸರ್ಕಾರವಾಗಲಿ, ಪ್ರಸ್ತುತ ಬಿಜೆಪಿ ಸರ್ಕಾರವಾಗಲಿ ಸಚಿವರನ್ನು ನೇಮಕ ಮಾಡಿಲ್ಲ. ತಕ್ಷಣ ನೇಮಿಸುವ ಕೆಲಸವಾಗಬೇಕು. ನಿಷ್ಕ್ರಿಯವಾಗಿರುವ ಗಡಿ ಸಂರಕ್ಷಣಾ ಆಯೋಗವನ್ನು ಬಲಪಡಿಸಬೇಕಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವ ಕೆಲಸವನ್ನು ಮುಖ್ಯಮಂತ್ರಿಯವರು ಮಾಡಬೇಕು’ ಎಂದು ಒತ್ತಾಯಿಸಿದರು.
ಬೇಜವಾಬ್ದಾರಿ ಹೇಳಿಕೆ:
‘ಜವಾಬ್ದಾರಿಯುತ ಹೇಳಿಕೆ ನೀಡಲು ಉದ್ಧವ್ ಠಾಕ್ರೆ ಕಲಿಯಬೇಕು. ಬೆಳಗಾವಿ, ಕಾರವಾರ ಸೇರಿದಂತೆ ಯಾವ ಭಾಗವೂ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಇಲ್ಲಿನ ಮರಾಠಿಗರು ಕನ್ನಡಿಗರ ಜೊತೆ ಬೆರೆತು, ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಬಿ.ಎಸ್. ಯಡಿಯೂರಪ್ಪ ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಬೇಕು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದರು.
ವೋಟ್ ಬ್ಯಾಂಕ್ ರಾಜಕೀಯ:
‘ಉದ್ಧವ್ ಠಾಕ್ರೆ ಅವರು ಗಡಿಭಾಗದ ಮರಾಠಿಗರ ಒಲವು ಗಳಿಸಲು ಇಂತಹ ಕೀಳು ಹೇಳಿಕೆ ನೀಡಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದಾರೆ. ಈ ಹೇಳಿಕೆ ವಿರುದ್ಧ ರಾಜ್ಯದ ಎಲ್ಲ ಶಾಸಕರು, ಸಂಸದರು ಒಗ್ಗಟ್ಟಾಗಿ ಹೋರಾಟ ಮಾಡಬೇಕು’ ಎಂದು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಬೇಳೆ ಬೇಯಿಸಿಕೊಳ್ಳಲು ಯತ್ನ:
‘ಶಿವಸೇನೆಯ ಅಧ್ಯಕ್ಷ ಬಾಳಾ ಠಾಕ್ರೆ ಕೂಡ ಇದೇ ರೀತಿ ಬೆಳಗಾವಿ ಹಾಗೂ ಗಡಿಭಾಗದ ವಿರುದ್ಧ ಸಾಕಷ್ಟು ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ರಾಜ್ಯದ ಒಂದಿಂಚೂ ಜಾಗವು ಮಹಾರಾಷ್ಟ್ರಕ್ಕೆ ಹೋಗಿಲ್ಲ. ಹೋಗುವುದೂ ಇಲ್ಲ. ಇದನ್ನು ಅವರ ಮಗ ಉದ್ಧವ್ ಠಾಕ್ರೆ ತಿಳಿದುಕೊಳ್ಳಬೇಕು. ಅವರ ಹೇಳಿಕೆಯನ್ನು ಖಂಡಿಸಿ, ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಠರಾವು ಪಾಸ್ ಮಾಡಬೇಕು’ ಎಂದು ಕನ್ನಡ ಪರ ಹೋರಾಟಗಾರ ಭೀಮಾಶಂಕರ ಪಾಟೀಲ ಒತ್ತಾಯಿಸಿದರು.
ಇಚ್ಛಾಶಕ್ತಿ ಪ್ರದರ್ಶಿಸಲಿ:
‘ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ಖಡಕ್ ಉತ್ತರ ನೀಡಬೇಕಾಗಿದೆ. ಗಡಿಯಲ್ಲಿರುವ ಸೊಲ್ಲಾಪುರ, ಜತ್ತ, ಅಕ್ಕಲಕೋಟ ಪ್ರದೇಶವನ್ನು ಮಹಾರಾಷ್ಟ್ರ ಆಕ್ರಮಿತ ಪ್ರದೇಶವೆಂದು ನಾವು ಕರೆಯಬಹುದೇ? ಇದನ್ನು ಉದ್ಧವ್ ಠಾಕ್ರೆ ಒಪ್ಪಿಕೊಳ್ಳುವರೇ? ಈಗಾಗಲೇ ಮಹಾಜನ್ ವರದಿಯ ಅನ್ವಯ ಬೆಳಗಾವಿ ಕರ್ನಾಟಕಕ್ಕೆ ಸೇರಿದೆ. ಇದನ್ನು ಮತ್ತೆ ಕೆಣಕುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೋರಾಟಗಾರ ಮಹಾದೇವ ತಳವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.