ADVERTISEMENT

ಮೇಲ್ಮನೆಯಲ್ಲಿ ಮೊಬೈಲ್‌ ತರುವುದಕ್ಕೆ ನಿಷೇಧ: ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 9:30 IST
Last Updated 23 ಫೆಬ್ರುವರಿ 2021, 9:30 IST
ಸಭಾಪತಿ ಬಸವರಾಜ ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ   

ಬೆಂಗಳೂರು: ವಿಧಾನ ಪರಿಷತ್ತಿನ ಒಳಗೆ ಮೊಬೈಲ್‌ ಫೋನ್‌ಗಳನ್ನು ತರುವುದಕ್ಕೆ ನಿಷೇಧ ವಿಧಿಸುವುದೂ ಸೇರಿ ಕೆಲವು ನಿಯಮಾವಳಿಗಳನ್ನು ಜಾರಿ ತರಲಾಗುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಖಾಸಗಿ ಸುದ್ದಿವಾಹಿನಿಗಳ ಕ್ಯಾಮರಾಗಳ ಪ್ರವೇಶಕ್ಕೆ ನಿರ್ಬಂಧ ಇರುವುದಿಲ್ಲ. ಆದರೆ, ವಿವೇಕ ಮತ್ತು ವಿವೇಚನೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೆಲವು ಸಣ್ಣ ಪುಟ್ಟ ಘಟನೆಗಳನ್ನೇ ದೊಡ್ಡದಾಗಿ ಇಡೀ ದಿನ ಟಿ.ವಿ.ಗಳಲ್ಲಿ ತೋರಿಸಲಾಗುತ್ತದೆ. ಸದನದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರೂ ಅದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಆ ಬಗ್ಗೆ ಎಚ್ಚರಿಕೆ ನೀಡುವುದು ಮಾಧ್ಯಮಗಳ ಕರ್ತವ್ಯ ಎಂಬುದು ನಿಜ. ಆದರೆ, ಇಡೀ ಸದನವೇ ಸರಿಯಾಗಿ ನಡೆಯುತ್ತಿಲ್ಲ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೊರಟ್ಟಿ ಹೇಳಿದರು.

ADVERTISEMENT

ಹೀಗೆಂದ ಮಾತ್ರಕ್ಕೆ ಮಾಧ್ಯಮವನ್ನು ದೂರ ಇಡುವುದೂ ಇಲ್ಲ, ನಿಷೇಧ ವಿಧಿಸುವುದಿಲ್ಲ. ಹೆಚ್ಚು ಸ್ವಯಂ ನಿಯಂತ್ರಣ ಮತ್ತು ವಿವೇಕದಿಂದ ಕಾರ್ಯ ನಿರ್ವಹಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ ಎಂದರು.

ವಿಧಾನಪರಿಷತ್‌ ಅಧಿವೇಶನವೂ ಮಾ.4 ರಿಂದಲೇ ಆರಂಭವಾಗುತ್ತದೆ. ಆದರೆ ಒಂದು ದೇಶ ಮತ್ತು ಒಂದು ಚುನಾವಣೆ ವಿಚಾರವಾಗಿ ಚರ್ಚೆ ನಡೆಸುವ ಸಂಬಂಧ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ನಾವು ಪ್ರಶ್ನೋತ್ತರ ಮತ್ತು ಇತರ ಕಲಾಪಗಳನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೊರಟ್ಟಿ ಹೇಳಿದರು.

ಮೀಸಲಾತಿಗೆ ಬಡತನವೇ ಮಾನದಂಡವಾಗಲಿ: ಇಂದಿನ ದಿನಗಳಲ್ಲಿ ಕುಟುಂಬಗಳ ಆರ್ಥಿಕ ವ್ಯವಸ್ಥೆಯನ್ನು ನೋಡಿ ಮೀಸಲಾತಿ ನಿಗದಿ ಮಾಡಬೇಕು. ಆಗ ಎಲ್ಲ ಸಮುದಾಯಗಳ ಬಡವರಿಗೂ ನ್ಯಾಯ ಸಿಗುತ್ತದೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಅವರು(ಮಠಾಧೀಶರು) ದೊಡ್ಡವರು, ಅವರ ಬಗ್ಗೆ ಮಾತನಾಡದೇ ಇರುವುದೇ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.