ADVERTISEMENT

ಸಾಹಿತ್ಯ ಸಮ್ಮೇಳನದಲ್ಲೇ ಪ್ರತಿಭಟನೆ: ಎಚ್ಚರಿಕೆ

ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ಕರವೇ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:18 IST
Last Updated 23 ಜನವರಿ 2021, 19:18 IST

ಬೆಂಗಳೂರು: ‘ಹಿಂದಿ ರಾಷ್ಟ್ರ ಭಾಷೆ ಎಂಬುದಾಗಿ ಸಾಹಿತಿ ದೊಡ್ಡರಂಗೇಗೌಡರು ನೀಡಿದ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಹಾವೇರಿಯಲ್ಲಿ ನಡೆಯಬೇಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಪ್ರತಿಭಟಿಸಲಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

‘ದೊಡ್ಡರಂಗೇಗೌಡರು ಕನ್ನಡದ ಹೆಸರಾಂತ ಕವಿ. ಅವರ ಮೇಲೆ ನಾವೆಲ್ಲರೂ ಅಭಿಮಾನ ಇಟ್ಟುಕೊಂಡಿದ್ದೇವೆ. ಈಗ ಇದ್ದಕ್ಕಿದ್ದಂತೆ ಅವರಿಗೆ ಹಿಂದಿ ವ್ಯಾಮೋಹ ಹೇಗೆ ಬಂದಿತು. ಇದನ್ನು ಅವರೇ ಬಿಡಿಸಿ ಹೇಳಬೇಕು. ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲೇ ಈ ಹೇಳಿಕೆ ಹೊರಬಂದಿರುವುದು ಕಳವಳಕಾರಿ. ಹಿಂದಿ ನಮ್ಮ ರಾಷ್ಟ್ರಭಾಷೆ ಯಲ್ಲ. ಹಾಗಿದ್ದರೂ ಅವರ ಬಾಯಿಂದ‌ ಕೆಲವು ಪಟ್ಟಭದ್ರ ಶಕ್ತಿಗಳು ಈ ರೀತಿ ಹೇಳಿಸಿರಬಹುದೇ ಎಂಬ ಅನುಮಾನವಿದೆ. ಕನ್ನಡ ಜಾನಪದ ಸೊಗಡಿನ ಸಾಹಿತಿ ಇದ್ದಕ್ಕಿದ್ದಂತೆ ಬದಲಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ಅವರು ಹಿಂದಿ ಹೇರಿಕೆ ಪರವಾಗಿ ಮಾತನಾಡಲು ಏನು ಕಾರಣ ಎಂದು ಅವರೇ ಬಹಿರಂಗಪಡಿಸಲಿ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಕ್ಕೆ ಋಣ ಸಂದಾಯ ಮಾಡುತ್ತಿದ್ದಾರೆಯೇ ಅಥವಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಹಿಂದಿಪರ ಮಾತಾಡಲು ಷರತ್ತು ವಿಧಿಸಲಾಗಿತ್ತೇ’ ಎಂದೂ ಅವರು ಕೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.