ADVERTISEMENT

ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಶಾಸಕ ಪ್ರತಾಪಗೌಡ ಪಾಟೀಲ ನಿವಾಸಕ್ಕೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:43 IST
Last Updated 14 ಜುಲೈ 2019, 19:43 IST
ಮಸ್ಕಿಯಲ್ಲಿನ ಶಾಸಕ ಪ್ರತಾಪಗೌಡ ಪಾಟೀಲ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಬಂದ ಸಿಂಧನೂರು ತಾಲ್ಲೂಕು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಭಾನುವಾರ ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದರು.
ಮಸ್ಕಿಯಲ್ಲಿನ ಶಾಸಕ ಪ್ರತಾಪಗೌಡ ಪಾಟೀಲ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಬಂದ ಸಿಂಧನೂರು ತಾಲ್ಲೂಕು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಭಾನುವಾರ ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದರು.   

ಮಸ್ಕಿ: ಶಾಸಕ ಪ್ರತಾಪಗೌಡ ಪಾಟೀಲ ಅವರು ರಾಜೀನಾಮೆ ನೀಡಿದ್ದನ್ನು ಪ್ರತಿಭಟಿಸಿ ಭಾನುವಾರ ಪಟ್ಟಣದಲ್ಲಿನ ಕಿಲ್ಲಾದಲ್ಲಿರುವ ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಸಿಂಧನೂರು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಖಾಜಾ ಹುಸೇನ್ ರೌಡಕುಂದ ನೇತೃತ್ವದಲ್ಲಿ 10 ಕ್ರೂಸರ್ ವಾಹನಗಳಲ್ಲಿ ಬಂದಕಾರ್ಯಕರ್ತರನ್ನು ಶಾಸಕರ ನಿವಾಸಕ್ಕೆ ತೆರಳುವ ಮಾರ್ಗದ ವಾಲ್ಮೀಕಿ ಭವನದ ಬಳಿ ಪೊಲೀಸರು ತಡೆದರು. ವಾಹನದಲ್ಲಿ ಠಾಣೆಗೆ ಕರೆದೊಯ್ದುನಂತರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿಖಾಜಾ ಹುಸೇನ್ ಮಾತನಾಡಿ, ‘ಪ್ರತಾಪಗೌಡ ಪಾಟೀಲ ಅವರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿ ಗೆಲ್ಲಿಸಿದೆ. ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿದೆ. ಅವರು ರಾಜೀನಾಮೆ ನೀಡಿದ್ದು ಖಂಡನೀಯ’ ಎಂದರು.

ADVERTISEMENT

ಮಸ್ಕಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಿಂದ ದೂರ ಉಳಿದಿದ್ದರು.

ಪ್ರತಿಭಟನೆಗೆ ಖಂಡನೆ: ‘ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾದ ಕಾರಣ ಮತದಾರರು ಸೇರಿ ಎಲ್ಲರ ಒತ್ತಾಸೆಯಂತೆ ಪ್ರತಾಪಗೌಡ ಪಾಟೀಲರು ರಾಜೀನಾಮೆ ನೀಡಿದ್ದಾರೆ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಹೇಳಿದರು.

ಶಾಸಕರ ನಿವಾಸದ ಬಳಿ ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕ್ಷೇತ್ರಕ್ಕೆ ಸಂಬಂಧವಿರದ ಬೇರೆ ತಾಲ್ಲೂಕಿನ ಯುವ ಕಾಂಗ್ರೆಸ್‌ನವರು ಬಾಡಿಗೆ ಕಾರ್ಯಕರ್ತರನ್ನು ಕರೆ ತಂದು ಶಾಸಕ ನಿವಾಸಕ್ಕೆ ಮುತ್ತಿಗೆ ಹಾಕಿಸಿದ್ದಾರೆ’ ಎಂದರು.

ಪ್ರಗತಿಪರ ಸಂಘಟನೆ ಪ್ರತಿಭಟನೆ: ‘ಪ್ರತಾಪಗೌಡ ಪಾಟೀಲ ಅವರು ರಾಜೀನಾಮೆ ನೀಡಿದ್ದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಹಣ ಮತ್ತು ಸಚಿವ ಸ್ಥಾನದ ಆಸೆಗಾಗಿ ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿದ್ದಾರೆ’ ಎಂದುಆರ್‌ವೈಎಫ್‌ ಸಂಘಟನೆ ಸಂಚಾಲಕ ನಾಗರಾಜ ಪೂಜಾರಿ ಹೇಳಿದರು.

‘ವಿಶ್ವಾಸಮತದಲ್ಲಿ ಪಾಲ್ಗೊಳ್ಳಬೇಕು’

ಸಿಂಧನೂರು: ‘ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ, ಯುವ ಕಾಂಗ್ರೆಸ್‍ನಿಂದ ಪ್ರತಿಭಟಿಸಲಾಗುವುದು’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಎಚ್ಚರಿಕೆ ನೀಡಿದರು.

‘ಪ್ರತಾಪಗೌಡ ಪಾಟೀಲ ಅವರು ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನವೂ ನೀಡಲಾಗಿದೆ. ಆದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,ಬಿಜೆಪಿ ಸೇರ್ಪಡೆಗೆ ಮುಂದಾಗಿರುವುದು ಅಕ್ಷಮ್ಯ ಅಪರಾಧ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.