ADVERTISEMENT

ಪಿಯು ಇಂಗ್ಲಿಷ್‌: ಶೇ 96ರಷ್ಟು ವಿದ್ಯಾರ್ಥಿಗಳು ಹಾಜರು

ಕೊರೊನಾ ಲೆಕ್ಕಿಸದ ವಿದ್ಯಾರ್ಥಿಗಳು: ಕಳೆದ ವರ್ಷಕ್ಕಿಂತಲೂ ಕಡಿಮೆ ಗೈರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 21:24 IST
Last Updated 18 ಜೂನ್ 2020, 21:24 IST
ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಬರೆಯಲು ಎನ್ಎಂಕೆಆರ್‌ವಿ ಪದವಿ ಪೂರ್ವ ಕಾಲೇಜು ಕೇಂದ್ರ ಎದುರು ಸರದಿಯಲ್ಲಿ ನಿಂತಿರುವ ವಿದ್ಯಾರ್ಥಿನಿಯರು
ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಬರೆಯಲು ಎನ್ಎಂಕೆಆರ್‌ವಿ ಪದವಿ ಪೂರ್ವ ಕಾಲೇಜು ಕೇಂದ್ರ ಎದುರು ಸರದಿಯಲ್ಲಿ ನಿಂತಿರುವ ವಿದ್ಯಾರ್ಥಿನಿಯರು   

ಬೆಂಗಳೂರು: ಲಾಕ್‌ಡೌನ್‌ ಕಾರಣಕ್ಕೆ ಮುಂದೂಡಲಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಗುರುವಾರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಶೇ 96ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

‘5,96,300 ವಿದ್ಯಾರ್ಥಿಗಳ ಪೈಕಿ 5,72,665 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 23,635 ಮಂದಿ ಗೈರಾಗಿದ್ದರು. ಕಳೆದ ವರ್ಷ ಇಂಗ್ಲಿಷ್‌ ಪರೀಕ್ಷೆಗೆ 36,642 ಮಂದಿ ಗೈರಾಗಿದ್ದರು. ವಿದ್ಯಾರ್ಥಿಗಳ ಸ್ಪಂದನೆಯಿಂದಾಗಿ ಇದೇ 25ರಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಗರಿಷ್ಠ ಸಂಖ್ಯೆಯ 1,748 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ 99 ವಿದ್ಯಾರ್ಥಿಗಳು ಗೈರಾಗಿದ್ದರು. ಜ್ವರದ ಕಾರಣಕ್ಕೆ ಗೈರಾಗಿದ್ದರೆ ಪೂರಕ ಪರೀಕ್ಷೆಯಲ್ಲಿ ಹೊಸದಾಗಿ ಹಾಜರಾದ ವಿದ್ಯಾರ್ಥಿ ಎಂಬ ನೆಲೆಯಲ್ಲಿ ಪರೀಕ್ಷೆ ಬರೆಯಬಹುದು’ ಎಂದರು.

ADVERTISEMENT

‘18,529 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿದ್ದರು. 1,889 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿ ಪರೀಕ್ಷೆ ಬರೆಯಬೇಕಿತ್ತು. ಈ ಎರಡೂ ವಿಭಾಗಗಳು ಸೇರಿ ಒಟ್ಟು 18,517 ಮಂದಿ ಪರೀಕ್ಷೆ ಬರೆದಿದ್ದಾರೆ’ ಎಂದರು.

ಕಂಟೈನ್‌ಮೆಂಟ್‌ ಪ್ರದೇಶದ ವರಿಂದಲೂ ಪರೀಕ್ಷೆ: ‘ಕಂಟೈನ್‌ಮೆಂಟ್ ಪ್ರದೇಶಗಳಿಂದ ಬಂದಿದ್ದ 223 ಮಂದಿ ಪರೀಕ್ಷೆ ಬರೆದಿದ್ದು, ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಜ್ವರ, ಶೀತ, ನೆಗಡಿ ಲಕ್ಷಣ ಇದ್ದ 20 ಮಂದಿಗೂ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸಲಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.‌

ಪತ್ರಿಕಾಗೋಷ್ಠಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಎಂ.ಟಿ.ರೇಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.