ಪರೀಕ್ಷೆ
ಬೆಂಗಳೂರು: ದ್ವಿತೀಯ ಪಿಯು 2024–25ನೇ ಸಾಲಿನ ಮೂರು ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದ 39,776 ಉಪನ್ಯಾಸಕರಲ್ಲಿ 36,868 ಮೌಲ್ಯಮಾಪಕರಿಗೆ ಗೌರವ ಸಂಭಾವನೆ ಪಾವತಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಂಡಳಿ ಜಂಟಿ ನಿರ್ದೇಶಕರು, ಇದೇ ಪ್ರಥಮ ಬಾರಿಗೆ ನೇರ ನಗದು ಪಾವತಿ ವ್ಯವಸ್ಥೆ ಮೂಲಕ (ಡಿಬಿಟಿ) ಜಮೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ 2,908 ಉಪನ್ಯಾಸಕರಿಗೆ ಹಣ ಜಮೆಯಾಗಿಲ್ಲ. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡದ ಕಾರಣ 957 ಮಂದಿಯ ಸಂಭಾವನೆ ಡಿಬಿಟಿಯಲ್ಲಿ ತಿರಸ್ಕೃತವಾಗಿವೆ. 980 ಉಪನ್ಯಾಸಕರು ಆಧಾರ್ ಸಂಖ್ಯೆಯನ್ನು ಪಾವತಿಗಾಗಿ ಜೋಡಿಸಿಲ್ಲ. 971 ಮಂದಿಯಪಾವತಿ ಪ್ರಕ್ರಿಯೆ ಹಂತದಲ್ಲಿದೆ. ಬಾಕಿ ಇರುವವರಿಗೆ ಮಾಹಿತಿ ನೀಡಿ, ಕ್ರಮವಹಿಸಲಾಗಿದೆ ಎಂದಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಗಾಗಿ ಪ್ರತಿ ವಿದ್ಯಾರ್ಥಿಯಿಂದ ಸಂಗ್ರಹಿಸುವ ₹400 ಶುಲ್ಕವನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ನೇರವಾಗಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮೆ ಮಾಡುತ್ತಾರೆ. ಪರೀಕ್ಷಾ ವೆಚ್ಚವನ್ನು ಆಯಾ ವರ್ಷದ ಬೇಡಿಕೆಗೆ ಅನುಗುಣವಾಗಿ ಸರ್ಕಾರ ಬಿಡುಗಡೆ ಮಾಡುತ್ತದೆ. ಪರೀಕ್ಷಾ ಶುಲ್ಕ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರದ ಆದೇಶದಂತೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.