ಬೆಂಗಳೂರು: ‘ಈ ವರ್ಷದ ನವೆಂಬರ್ 10ರೊಳಗೆ ವರ್ಗಾವಣೆ ಕಾಯ್ದೆ ಅನುಷ್ಠಾನಗೊಳಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು. ಇಲ್ಲದಿದ್ದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿ ಎದುರು ಕುಟುಂಬ ಸಮೇತರಾಗಿಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಸರ್ಕಾರವನ್ನು ಎಚ್ಚರಿಸಿದೆ.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ.
‘ವರ್ಗಾವಣೆ ಸಂಬಂಧ ಹಿಂದಿನ ಶಿಕ್ಷಣ ಸಚಿವರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರ ಜೊತೆಗೆ ಹಲವು ಬಾರಿ ಚರ್ಚಿಸಲಾಗಿತ್ತು. ನೀವು ಸಚಿವರಾದ ಮೇಲೆ ನಿಮ್ಮೊಂದಿಗೂ ಈ ಬಗ್ಗೆ ಮಾತನಾಡಿದ್ದೇವೆ. ಹೀಗಿದ್ದರೂ ಕಾಯ್ದೆ ಅನುಷ್ಠಾನಗೊಂಡಿಲ್ಲ. ಇಲಾಖೆಯ ವಿಳಂಬ ಧೋರಣೆ ಖಂಡಿಸಿ ಒಮ್ಮೆ ಸಾಂಕೇತಿಕವಾಗಿ ಧರಣಿ ನಡೆಸಲಾಗಿದೆ. ಅಧಿವೇಶನದ ಸಮಯದಲ್ಲೇ ಕಾಯ್ದೆ ಜಾರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ತಾವು ಮಾತು ಮರೆತಿದ್ದೀರಿ. ನವೆಂಬರ್ 10ರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.