ADVERTISEMENT

ಕಳಪೆ ಔಷಧಿ: ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 22:02 IST
Last Updated 14 ಡಿಸೆಂಬರ್ 2021, 22:02 IST

ಬೆಳಗಾವಿ (ಸುವರ್ಣ ವಿಧಾನಸೌಧ): ಕಳಪೆ ಗುಣಮಟ್ಟದ ಔಷಧಿಗಳನ್ನು ಖರೀದಿ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 2014–15, 2016–17, 2017–18, 2018–19ನೇ ಸಾಲಿನ ಸಿಎಜಿ ವರದಿಯಲ್ಲಿನ ವಿಷಯಗಳ ಬಗ್ಗೆ ಸಮಿತಿಯ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

2014–15ರಿಂದ 2016–17ರ ಅವಧಿಯಲ್ಲಿ ರಾಜ್ಯ ಡ್ರಗ್ಸ್‌ ಲಾಜಿಸ್ಟಿಕ್‌ ಆ್ಯಂಡ್‌ ವೇರ್ ಹೌಸಿಂಗ್‌ ಸೊಸೈಟಿಯು 6,776 ಬ್ಯಾಚ್‌ಗಳ ಔಷಧ ಖರೀದಿಸಿತ್ತು. ಈ ಪೈಕಿ ₹1.23 ಕೋಟಿ ಮೌಲ್ಯದ 27 ಬ್ಯಾಚ್‌ಗಳ ಔಷಧ ಉತ್ತಮ ಗುಣಮಟ್ಟದ್ದು ಆಗಿರಲಿಲ್ಲ. ಅದೇ ಅವಧಿಯಲ್ಲಿ, ₹4.08 ಕೋಟಿ ಮೊತ್ತದ 77 ಬ್ಯಾಚ್‌ಗಳ ಔಷಧ ಉತ್ತಮ ಗುಣಮಟ್ಟದ್ದು ಆಗಿರಲಿಲ್ಲ ಎಂದು ರಾಜ್ಯ ಔಷಧ ನಿಯಂತ್ರಕರು ಹೇಳಿದ್ದರು. ಸೊಸೈಟಿ ಹಾಗೂ ಔಷಧ ನಿಯಂತ್ರಕರ ನಡುವೆ ಸಮನ್ವಯ ಕೊರತೆ ಇದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

ಕಳಪೆ ಗುಣಮಟ್ಟದ ಔಷಧಗಳನ್ನು ಸರಬರಾಜು ಮಾಡಿದ ಸಂಸ್ಥೆಗಳಿಂದ ಪೂರ್ಣ ಮೊತ್ತವನ್ನು ಇಲ್ಲಿಯವರೆಗೆ ವಸೂಲಿ ಮಾಡಿಲ್ಲ. ಸರಬರಾಜುದಾರರ ಭದ್ರತಾ ಠೇವಣಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಂಡು ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಸಮಿತಿ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.