ADVERTISEMENT

‘ಶಂಕರ್, ನಾಗರಾಜ್, ವಿಶ್ವನಾಥ್ ಸಚಿವರಾಗಲು ನಿರ್ಬಂಧ ವಿಧಿಸಿ’

ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ: ಸರ್ಕಾರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:40 IST
Last Updated 31 ಆಗಸ್ಟ್ 2020, 18:40 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಆರ್. ಶಂಕರ್, ಎಂಟಿಬಿ ನಾಗರಾಜ್ ಮತ್ತು ಎ.ಎಚ್. ವಿಶ್ವನಾಥ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸದಂತೆ ನಿರ್ಬಂಧಿಸಬೇಕು’ ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್ ನೀಡಲು ಆದೇಶಿಸಿದೆ.

‘ಈ ಮೂವರು ಸಂಪುಟಕ್ಕೆ ಸೇರ್ಪಡೆಯಾಗಲು ಸಾಂವಿಧಾನಿಕ ಮಾನ್ಯತೆ ಹೊಂದಿಲ್ಲ. ಈ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರೆ ಸಂವಿಧಾನದ ಉಲ್ಲಂಘನೆಯಾಗಲಿದೆ’ ಎಂದು ಪ್ರತಿಪಾದಿಸಿದರು.

ವಕೀಲ ಎ.ಎಸ್. ಹರೀಶ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ADVERTISEMENT

‘ಈ ಮೂವರು ಸಚಿವರಾಗುತ್ತಿದ್ದಾರೆ ಎಂಬುದಕ್ಕೆ ಏನು ಖಾತರಿ ಇದೆ’ ಎಂದು ಪ್ರಶ್ನಿಸಿದ ಪೀಠ, ಯಾವುದೇ ಮಧ್ಯಂತರ ಆದೇಶ ನೀಡಿಲ್ಲ.

‘ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ‘ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿರುವುದರಿಂದ ಸಂವಿಧಾನದ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ವಿಧಾನಸಭೆಯ ಈ ಹಿಂದಿನ ಸ್ಪೀಕರ್ ಅವರು 17 ಶಾಸಕರನ್ನು ಅನರ್ಹಗೊಳಿಸಿದ್ದವರಲ್ಲಿ ಈ ಮೂವರು ಸೇರಿದ್ದರು. ಅನರ್ಹತೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ‘ಆಯ್ಕೆ’, ‘ಮರು ಆಯ್ಕೆ’ ಮತ್ತು ‘ನಾಮಕರಣ’ ಪದಗಳ ಕುರಿತು ವ್ಯಾಪಕ ಚರ್ಚೆ ನಡೆಸಿತ್ತು. ಚುನಾವಣೆಯಲ್ಲಿ ಮರು ಆಯ್ಕೆಯಾಗದ ಹೊರತು ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

‘ಈ ಮೂವರು ಚುನಾವಣೆಯಲ್ಲಿಬು ಮರು ಆಯ್ಕೆಯಾಗಿಲ್ಲದ ಕಾರಣ ಸಚಿವ ಸ್ಥಾನ ಪಡೆಯುವ ಅರ್ಹತೆ ಹೊಂದಿಲ್ಲ’ ಎಂಬುದು ಅರ್ಜಿದಾರರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.