ADVERTISEMENT

ಪಿಯುಸಿ: ‘ಸಾಮೂಹಿಕ ತೇರ್ಗಡೆ’ಗೆ ಮನವಿ!

ಸಹಾಯವಾಣಿಗೆ ಮೊರೆ ಹೋದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 21:21 IST
Last Updated 20 ಏಪ್ರಿಲ್ 2022, 21:21 IST
   

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಂದು ದಿನ ಬಾಕಿ ಇರುವಂತೆ, ಆತಂಕಭರಿತರಾಗಿರುವ ಕೆಲವು ವಿದ್ಯಾರ್ಥಿಗಳು ‘ಸಾಮೂಹಿಕ’ವಾಗಿ ಎಲ್ಲರನ್ನೂ ಪಾಸ್‌ ಮಾಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ!

ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಇಲಾಖೆ ಸಹಾಯ ವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಗೆ ಕರೆ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳು, ಪರೀಕ್ಷೆ ಇಲ್ಲದೆ ಎಲ್ಲರನ್ನೂ ಪಾಸ್‌ ಮಾಡುವಂತೆ ಬೇಡಿಕೆ ಮುಂದಿಡುತ್ತಿದ್ದಾರೆ ಎಂದು ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಸಿಬ್ಬಂದಿ ತಿಳಿಸಿದರು.

‘ಕೋವಿಡ್‌ ಕಾರಣದಿಂದ ಕಳೆದ ವರ್ಷ ಪ್ರಥಮ ಪಿಯುಸಿ ಪರೀಕ್ಷೆ ನಡೆದಿಲ್ಲ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಗೆ ಪ್ರವೇಶ ನೀಡಲಾಗಿತ್ತು. ಹೀಗಾಗಿ, ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಅಂಥ ಕೆಲವು ವಿದ್ಯಾರ್ಥಿಗಳು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹೇಗಿರಬಹುದೆಂಬ ಬಗ್ಗೆ ಗಾಬರಿಗೊಂಡಿದ್ದಾರೆ. ಕೆಲವರು ಪರೀಕ್ಷೆ ರದ್ದುಪಡಿಸಿ, ಎಲ್ಲರನ್ನೂ ಉತ್ತೀರ್ಣಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ’ ಎಂದೂ ಸಿಬ್ಬಂದಿ ತಿಳಿಸಿದರು.

ADVERTISEMENT

‘ಪರೀಕೆಗೆ ತಯಾರಿ ನಡೆಸುತ್ತಿರುವ ಕೆಲವು ವಿದ್ಯಾರ್ಥಿಗಳು ಮಕ್ಕಳ ಸಹಾಯವಾಣಿಗೂ (ಚೈಲ್ಡ್‌ ಲೈನ್‌–1098) ಕರೆ ಮಾಡುತ್ತಿದ್ದಾರೆ. ಈ ರೀತಿ ಕರೆ ಮಾಡಿದ 18 ವರ್ಷದ ವಿದ್ಯಾರ್ಥಿಯೊಬ್ಬ, ವಾರ್ಷಿಕ ಪರೀ ಕ್ಷೆಯ ದಿನಗಳು ಘೋಷಣೆಯಾದ ಬಳಿಕ ತೀವ್ರ ಆತಂಕಗೊಂಡಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಅದನ್ನು ಕೇಳಿಸಿ ಕೊಂಡ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರು ಅಚ್ಚರಿಗೊಂಡಿದ್ದಾರೆ!

‘ಕೋವಿಡ್‌ ಸಾಂಕ್ರಾಮಿಕ ರೋಗ‌ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ವಿದ್ಯಾರ್ಥಿಗಳಿಗೆ ಅವರ ಭಾವನೆಗಳನ್ನು ಹಂಚಿಕೊಳ್ಳಲು ಗೆಳೆಯರೇ ಇಲ್ಲದಂಥ ಸ್ಥಿತಿ ನಿರ್ಮಾಣ ಆಗಿದೆ. ಪರೀಕ್ಷೆಯನ್ನು ಎದುರಿಸುವುದಕ್ಕೂ ಮೊದಲು ಅವರ ಜೊತೆ ಶಿಕ್ಷಕರು ಆಪ್ತಸಮಾಲೋಚನೆ ನಡೆಸಿ, ಆತ್ಮ‌ವಿಶ್ವಾಸ ತುಂಬಬೇಕು. ಪೋಷಕರು ಕೂಡಾ ಮಕ್ಕಳ ಆರೈಕೆ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಂಹ ಜಿ. ರಾವ್‌ ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.