ಕ್ವಾಂಟಮ್ ಸಮಾವೇಶದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಡಾ. ಡೇವಿಡ್ ಗ್ರೋಸ್ ಮತ್ತು ಡಂಕನ್ ಹಲ್ಡೇನ್ ಅವರು, ‘ಅತ್ಯುತ್ತಮ ಪೋಸ್ಟರ್’ ಪ್ರಶಸ್ತಿ ಪಡೆದ ಐಐಎಸ್‌ಸಿ–ಬೆಂಗಳೂರಿನ ತಂಡದ ವಿದ್ಯಾರ್ಥಿಗೆ ವಿತರಿಸಿದರು. ಎನ್.ಎಸ್. ಬೋಸರಾಜು, ಎಂ.ಸಿ. ಸುಧಾಕರ್ ಉಪಸ್ಥಿತರಿದ್ದರು
ಬೆಂಗಳೂರು: ‘ಕ್ವಾಂಟಮ್ ಸಮಾವೇಶದ ಮೊದಲ ಆವೃತ್ತಿ ವಿಶ್ವಭೂಪಟದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದು, ಇದನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
‘ಕ್ವಾಂಟಮ್ ಇಂಡಿಯಾ– ಬೆಂಗಳೂರು ಸಮಾವೇಶ - 2025’ದ ಸಮಾರೋಪದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಎರಡು ದಿನದ ಈ ಸಮಾವೇಶಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. 1,951 ಕ್ಕೂ ಹೆಚ್ಚು ಪ್ರತಿನಿಧಿಗಳೂ ದೇಶ ಹಾಗೂ ವಿದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು. ನೊಬೆಲ್ ಪ್ರಶಸ್ತಿ ಪುರಸ್ಕೃತರು ಕ್ವಾಂಟಮ್ ಕ್ಷೇತ್ರದಲ್ಲಿರುವ ಅವಕಾಶಗಳು, ಅವುಗಳನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದಾರೆ’ ಎಂದರು.
‘ರಾಷ್ಟ್ರೀಯ ಕ್ವಾಂಟಮ್ ಮಿಷನ್‌ನ ಅಧ್ಯಕ್ಷರು ಸಮಾವೇಶದಲ್ಲಿ ಭಾಗಿಯಾಗಿ, ಕರ್ನಾಟಕ ರಾಜ್ಯ ಈ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಪಡೆದುಕೊಳ್ಳುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವುದನ್ನು ಹೇಳಿದ್ದಾರೆ’ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಾಂಗ್ಲಾದೇಶ, ಕೆನಡಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಸ್ರೇಲ್, ಇಟಲಿ, ಜಪಾನ್, ನೇಪಾಳ, ನೆದರ್ಲಾಂಡ್, ಓಮನ್, ಸೌದಿ ಅರೇಬಿಯಾ, ಸಿಂಗಪುರ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಕ್ರಮಗಳ ಅಳವಡಿಕೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಹಲವು ದೇಶಗಳ ಪ್ರತಿನಿಧಿಗಳು ರಾಜ್ಯದ ಜೊತೆ ಕೈಜೋಡಿಸಿ, ಉದ್ದಿಮೆಗಳನ್ನು ಸ್ಥಾಪಿಸಲು, ಹೂಡಿಕೆಗೆ ಒಲವು ತೋರಿಸಿದ್ದಾರೆ ಎಂದು ಬೋಸರಾಜು ಮಾಹಿತಿ ನೀಡಿದರು.
‘ಜಾಗತಿಕ ಕ್ವಾಂಟಮ್ ಶಕ್ತಿ ಕೇಂದ್ರವಾಗಿ ಕರ್ನಾಟಕವನ್ನು ರೂಪಿಸಲು ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಯೋಜನೆಯ ಮೂಲಕ ‘ಕ್ವಾಂಟಮ್ ಪಠ್ಯಕ್ರಮ’ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್‌ಟಿ– ಪಿಎಚ್‌ಡಿ ಫೆಲೋಶಿಪ್‌ಗಳನ್ನು ವಿಸ್ತರಿಸಲಾಗುವುದು. ಈ ಫೆಲೋಶಿಪ್‌ಗಳು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ ಮತ್ತು ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಸಾಧನಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ’ ಎಂದರು.
ಐಐಐಟಿ– ಧಾರವಾಡ ರಾಯಚೂರು ಒಪ್ಪಂದ:
ಕ್ವಾಂಟಮ್ ಸಮಾವೇಶದಲ್ಲಿ ಐಐಐಟಿ– ಧಾರವಾಡ ಹಾಗೂ ರಾಯಚೂರು ಸಂಸ್ಥೆಗಳು ಕ್ಯೂಪೈಎಐ ಜೊತೆ ಕ್ಯೂ-ವಿದ್ಯಾ 8 ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಸ್ಥಾಪನೆಗಾಗಿ ಒಪ್ಪಂದ ಮಾಡಿಕೊಂಡಿವೆ. ಈ ಯೋಜನೆಯು ಟ್ರೇನ್-ದಿ-ಟ್ರೈನರ್ಸ್ ಕಾರ್ಯಕ್ರಮಗಳನ್ನು ಆರಂಭಿಸಿ ಕ್ವಾಂಟಮ್ ಸಂಶೋಧಕರನ್ನು ಸದೃಢಗೊಳಿಸಿ ಕ್ವಾಂಟಮ್ ತಂತ್ರಜ್ಞಾನಗಳ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು. ‘ಕ್ವಾಂಟಮ್ ಸಮಾವೇಶಕ್ಕೆ 500 ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿತ್ತು. ಆದರೆ 1951 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದರು. ಒಟ್ಟು 24 ಗೋಷ್ಠಿಗಳಲ್ಲಿ 19 ದೇಶಗಳ 75ಕ್ಕೂ ಹೆಚ್ಚು ಪ್ರತಿನಿಧಿಗಳು ಕ್ವಾಂಟಮ್ ಕ್ಷೇತ್ರ ಬೆಳವಣಿಗೆ ಹೊಸ ಸಾಧ್ಯತೆಗಳ ಬಗ್ಗೆ ಮಾಹಿತಿ ಒದಗಿಸಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.