ADVERTISEMENT

ಖಾಲಿ ಇಲ್ಲದ ಮುಖ್ಯಮಂತ್ರಿ ಹುದ್ದೆಗಾಗಿ ‘ಕೈ’ ಕಚ್ಚಾಟ: ಕಂದಾಯ ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 15:46 IST
Last Updated 9 ಆಗಸ್ಟ್ 2022, 15:46 IST
 ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ‘ಖಾಲಿ ಇಲ್ಲದ ಮುಖ್ಯಮಂತ್ರಿ ಹುದ್ದೆಗಾಗಿ ಪ್ರತಿ ದಿನ ಹಾದಿ– ಬೀದಿಯಲ್ಲಿ ಕಚ್ಚಾಡುವುದು ಕಾಂಗ್ರೆಸ್‌ ನಾಯಕರ ಸಂಸ್ಕೃತಿ. ಈಗ ಈ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದ್ದು, ತಿರುಕನ ಕನಸು ಕಾಣುತ್ತಿದ್ದಾರೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಕಿಡಿಕಾರಿದ್ದಾರೆ.

‘ಕಾಂಗ್ರೆಸ್ಸಿನವರು ಮೂರನೇ ಸಿಎಂ ಎಂದು ಟ್ವೀಟ್ ಮಾಡಿರುವುದು ಹಾಸ್ಯಾಸ್ಪದ’ ಎಂದು ತಿರುಗೇಟು ನೀಡಿರುವ ಅವರು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.

‘ಅಮಿತ್‌ ಶಾ ಅವರು ಬಂದಾಗ ಎಲ್ಲ ಸಭೆಗಳಲ್ಲೂ ಹಾಜರಿದ್ದೆ. ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ಗೆ ಇತರರ ಮನೆ ಕೆಡಿಸುವ ಚಿಂತೆ :ಸುನಿಲ್

‘ಕಾಂಗ್ರೆಸ್‌ ಪಕ್ಷದ ಮನೆಯೇ ಕೆಟ್ಟು ಹೋಗಿದೆ. ಅಲ್ಲಿರುವವರಿಗೆ ಸದಾ ಕಾಲ ಬೇರೆಯವರ ಮನೆ ಕೆಡಿಸುವ ಚಿಂತೆ’ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಟೀಕಿಸಿದ್ದಾರೆ.

‘ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ಮಾತನಾಡಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿಯ ಮನೆಯನ್ನು ಕೆಡಿಸುವುದು ಹೇಗೆ ಎಂಬ ಚಿಂತೆಯಲ್ಲಿ ಆ ಪಕ್ಷ ಇದೆ. ಅದಕ್ಕಾಗಿ ಕೇವಲ ಊಹಾಪೋಹಗಳ ಮೇಲೆ ರಾಜಕಾರಣ ಮಾಡುತ್ತಿದೆ’ ಎಂದು ಟೀಕಿಸಿದ್ದಾರೆ.

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ನಮ್ಮ ಪಕ್ಷದ ಹೈಕಮಾಂಡ್‌ ಹೇಳಿದೆ. ಕಾಂಗ್ರೆಸ್‌ ನಾಯಕರಿಗೆ ತಾಕತ್ತಿದ್ದರೆ ಯಾರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಾರೆ ಎನ್ನುವುದನ್ನು ಹೇಳಲಿ’ ಎಂದು ಸವಾಲು ಹಾಕಿದ್ದಾರೆ.

ಬದಲಿಸುವ ಚಾಳಿ ಕಾಂಗ್ರೆಸ್‌ನದು:ಸಿ.ಸಿ.ಪಾಟೀಲ

ಮುಖ್ಯಮಂತ್ರಿಗಳನ್ನು ಪದೇ ಪದೇ ತಮ್ಮಿಷ್ಟಕ್ಕೆ ತಕ್ಕಂತೆ ಬದಲಿಸುವ ಚಾಳಿ ಇರುವುದು ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ಬೊಮ್ಮಾಯಿ ಅವರು ಜನಪರ ಆಡಳಿತವನ್ನು ಸಮರ್ಥವಾಗಿ ನೀಡಿದ್ದಾರೆ. ಮುಂದೆಯೂ ಸುಭದ್ರ ಸರ್ಕಾರ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಕಾಂಗ್ರೆಸ್‌ಗೆ ಹಗಲುಗನಸು ಬೇಡ. ಈಗ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.