ADVERTISEMENT

ಮನೆ ಕ್ವಾರಂಟೈನ್‌ಗೆ ಒಳಗಾದವರಿಗೆ ಟ್ಯಾಗ್: ಸಚಿವ ಆರ್. ಅಶೋಕ್

ನೂತನ ವ್ಯವಸ್ಥೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 8:58 IST
Last Updated 29 ಜೂನ್ 2020, 8:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮನೆ ಕ್ವಾರಂಟೈನ್‌ಗೆ ಒಳಗಾಗುವವರಿಗೆ ರಬ್ಬರ್ ಸ್ಟ್ಯಾಂಪ್ ಮುದ್ರೆ ‌ಬದಲು ಟ್ಯಾಗ್‌ ಹಾಕುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಈ ಟ್ಯಾಗ್‌ ಅನ್ನು ಕತ್ತರಿಸಿದಲ್ಲಿ ಸೈರನ್‌ ಮೊಳಗಲಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮನೆ ಕ್ವಾರಂಟೈನ್‌ಗೆ ಒಳಗಾದ ಕೆಲವರು ನಿಯಮ ಉಲ್ಲಂಘಿಸಿ ಹೊರಗಡೆ ಹೋಗುತ್ತಿದ್ದಾರೆ. ಆಸ್ಪತ್ರೆಗಳಿಂದಲೂ ರೋಗಿಗಳು ಪರಾರಿಯಾಗುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ.ಹಾಗಾಗಿ ವಿಮಾನ ನಿಲ್ದಾಣಗಳಲ್ಲಿ ಲಗೇಜುಗಳಿಗೆ ಅಳವಡಿಸುವ ಮಾದರಿಯ ಟ್ಯಾಗ್‌ಗಳನ್ನು ಕೈಗಳಿಗೆ ಅಳವಡಿಸಲು ಸಿದ್ಧಪಡಿಸಲಾಗುತ್ತಿದೆ.ಈ ವ್ಯವಸ್ಥೆ ರೂಪಿಸುವ ಸಂಬಂಧ ಕಂಪನಿಯೊಂದರ ಜತೆಗೆ ಮಾತುಕತೆ ನಡೆಸಲಾಗಿದೆ’ ಎಂದರು.

‘ಕೈಗೆ ಅಳವಡಿಸಿದ ಟ್ಯಾಗ್‌ ಅನ್ನು 14 ದಿನಗಳವರೆಗೆ ತೆಗೆಯುವಂತಿಲ್ಲ. ಒಂದು ವೇಳೆ ಅದನ್ನು ಕತ್ತರಿಸಿದರೆ ಸೈರನ್ ಮೊಳಗಲಿದೆ. ಅವರು ಎಲ್ಲೆಲ್ಲಿ ಚಲಿಸುತ್ತಾರೆ ಎನ್ನುವುದು ಕೂಡ ದಾಖಲಾಗುತ್ತದೆ. ಸಮುದಾಯಕ್ಕೆ ಸೋಂಕು ಹರಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ನೂತನ ಆ್ಯಪ್:‘ನಗರದ ಪ್ರತಿ ಆಸ್ಪತ್ರೆಯಲ್ಲಿ ಹಾಸಿಗೆಗೆ ಶಾಶ್ವತ ಸಂಖ್ಯೆ ನಮೂದಿಸಲಾಗುತ್ತದೆ. ಹಾಸಿಗೆಗಳ ನಿರ್ವಹಣೆಗೆ ಹಾಗೂ ಆ್ಯಂಬುಲೆನ್ಸ್‌ ನಿರ್ವಹಣೆಗೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಲಾಗುತ್ತದೆ. ಒಂದು ವಾರದಲ್ಲಿ ಬೆರಳ ತುದಿಯಲ್ಲಿಯೇ ಆಸ್ಪ‍ತ್ರೆಗಳು ಹಾಗೂ ಚಿಕಿತ್ಸೆಯ ಸೌಲಭ್ಯದ ಮಾಹಿತಿ ದೊರೆಯುವ ಮೊಬೈಲ್‌ ಆ್ಯಪ್ ಸಿದ್ಧಪಡಿಸಲಾಗುವುದು’ ಎಂದರು.

‘ಪೊಲೀಸರು, ಆಶಾ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್‌ಗೆ ತಪಾಸಣೆ ನಡೆಸಲು ನಿರ್ಧರಿಸಿದ್ದೇವೆ.ಸ್ಕ್ಯಾನಿಂಗ್ ಮಾದರಿಯಲ್ಲಿ ಕೋವಿಡ್ ಪರೀಕ್ಷೆ ಮಾಡುವ ವಿನೂತನ ಕಿಟ್‌ ಅನ್ನು ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದೆ. ಯಲಹಂಕದಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲಾಗಿದೆ. ತಜ್ಞರ ಸಮಿತಿ ಒಪ್ಪಿದಲ್ಲಿ ನಗರದಾದ್ಯಂತ ಈ ಮಾದರಿಯ ಪರೀಕ್ಷೆ ನಡೆಸುತ್ತೇವೆ‘ ಎಂದರು.

‘ಗುಣಮಟ್ಟದ ಊಟ ನೀಡಿ’
ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಆರ್. ಅಶೋಕ, ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಮಾಡಿರುವ ವ್ಯವಸ್ಥೆ ಪರಿಶೀಲಿಸಿದರು. ರೋಗಿಗಳಿಗೆ ನೀಡುತ್ತಿರುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಗುಣಮುಟ್ಟಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.