ಅಶೋಕ ಹಾಗೂ ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರಗಳು
ಮೈಸೂರು: ‘ಅಧಿಕಾರ ಹಸ್ತಾಂತರ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇತಿಶ್ರೀ ಹಾಡುವ ಯೋಗ್ಯತೆ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ. ಹೀಗೆಯೇ ಮುಂದೂಡುವ ಮನಸ್ಥಿತಿಯಲ್ಲಿದೆ. ಸಿದ್ದರಾಮಯ್ಯ ಯಾವಾಗಲೂ ಸೀಟ್ ಭದ್ರಪಡಿಸಿಕೊಂಡೇ ಇರುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕಿಸಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕುರ್ಚಿಗೆ ಫೆವಿಕಲ್ ಹಾಕಿ ಅಂಟಿಸಿಕೊಳ್ಳುವ ವಿದ್ಯೆ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಡಿ.ಕೆ. ಶಿವಕುಮಾರ್‌ಗೆ ಇದೆಲ್ಲವೂ ಗೊತ್ತಿಲ್ಲ. ಹೊಡೆದು ಕಿತ್ತುಕೊಳ್ಳುವ ಕಾಲ ಇದಲ್ಲ, ತಲೆ ಬಳಸಬೇಕಾದ ಕಾಲವಿದು’ ಎಂದರು.
‘ಸಿದ್ದರಾಮಯ್ಯ ಐದು ವರ್ಷದವರೆಗೂ ಕುರ್ಚಿ ಬಿಡುವುದಿಲ್ಲ. ಅದಂತೂ ಪಕ್ಕಾ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ಆ ಹೆಣವನ್ನು ಯಾರು ಯಾವ ಭಾಗದಿಂದಾದರೂ ಹೊರಲಿ, ಅದು ನಮಗೆ ಬೇಕಿಲ್ಲ’ ಎಂದರು.
‘ಗ್ಯಾರಂಟಿ ಹೊರೆ ಆಗುತ್ತಿದೆ ಎಂದು ಈಗ ಹೇಳುತ್ತಿರುವ ಅವರಿಗೆ ಆಗ ಜ್ಞಾನವಿರಲಿಲ್ಲವೇ? ಗ್ಯಾರಂಟಿ ಕಿತ್ತು ಹಾಕಲು ನಡೆಸುತ್ತಿರುವ ಹುನ್ನಾರವಿದು. ಯುವನಿಧಿ ಈಗಾಗಲೇ ಗೋವಿಂದ ಆಗಿ ಹೋಗಿದೆ. ಬಸ್‌ಗಳೆಲ್ಲಾ ನಿಂತು ಹೋಗುತ್ತಿವೆ. ಆರು ತಿಂಗಳಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ’ ಎಂದು ದೂರಿದರು.
‘ದೇವಸ್ಥಾನಗಳನ್ನು ಸುತ್ತುತ್ತಿರುವ ಡಿ.ಕೆ. ಶಿವಕುಮಾರ್ ನಾಮದ ಮೇಲೆ ನಾಮ ಹಾಕಿಕೊಳ್ಳುತ್ತಿದ್ದಾರೆ. ಒಪ್ಪಂದ ಆಗಿದೆ ಎನ್ನುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಆ ಬಗ್ಗೆ ಒಮ್ಮೆಯೂ ಹೇಳಿಯೇ ಇಲ್ಲ. ಒಪ್ಪಂದ ಆಗಿದೆಯೋ ಇಲ್ಲವೋ ತಿಳಿಸಿಬಿಡಿ. ಕಿತ್ತಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದೀರೇಕೆ?’ ಎಂದರು. ‘ಈ ಬೆಳವಣಿಗೆಯನ್ನು ರಾಜ್ಯದ ಜನರೊಂದಿಗೆ ನಾವೂ ಎಂಜಾಯ್ ಮಾಡುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.