ಆರ್. ಅಶೋಕ
ಸುವರ್ಣ ವಿಧಾನಸೌಧ (ಬೆಳಗಾವಿ): ‘ರೈತರು, ಬಡವರು, ಮಠ–ಮಂದಿರ, ಶಾಲೆಗಳ ಜಮೀನಿನ ಪಹಣಿಯ 9 ಮತ್ತು 11ನೇ ಕಾಲಂಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ತಕ್ಷಣ ರದ್ದುಗೊಳಿಸಬೇಕು. ವಕ್ಫ್ ಆಸ್ತಿಗಳ ಪಟ್ಟಿಗೆ ಸಂಬಂಧಿಸಿದಂತೆ 1974ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನೇ ರದ್ದು ಮಾಡಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಶುಕ್ರವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.
ವಕ್ಫ್ ಮಂಡಳಿಯು ತನ್ನ ಆಸ್ತಿಗಳನ್ನು ಅತಿಕ್ರಮಿಸಿದ ಆರೋಪದ ಮೇಲೆ ಜನರಿಗೆ ನೋಟಿಸ್ ಜಾರಿಗೊಳಿಸುತ್ತಿರುವ ಕುರಿತು ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ದೀರ್ಘಕಾಲ ಮಾತನಾಡಿದ ಅವರು, ‘ವಕ್ಫ್ ಮಂಡಳಿ ರಾಜ್ಯದ ಜನರಿಗೆ ದೆವ್ವದಂತೆ ಕಾಣಿಸತೊಡಗಿದೆ. ಮಂಡಳಿಯ ಹಸ್ತಕ್ಷೇಪದಿಂದ ಜನರನ್ನು ರಕ್ಷಿಸಬೇಕಿದೆ. ವಕ್ಫ್ ಅದಾಲತ್ ಹೆಸರಿನಲ್ಲಿ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತರುತ್ತಿರುವ ತಿದ್ದುಪಡಿಯನ್ನು ಸರ್ವಾನುಮತದಿಂದ ಬೆಂಬಲಿಸಬೇಕು’ ಎಂದು ಒತ್ತಾಯಿಸಿದರು.
‘ನೈಜ ಮುಸ್ಲಿಮರು ದಾನಮಾಡಿದ ಆಸ್ತಿ ಮಾತ್ರ ವಕ್ಫ್ ಆಸ್ತಿಯಾಗುತ್ತದೆ. ಆದರೆ, ಪಿತ್ರಾರ್ಜಿತ ಆಸ್ತಿಗಳು, ಶಾಲೆಗಳು, ಮಠ–ಮಂದಿರಗಳ ಸ್ವತ್ತುಗಳು, ಅರಣ್ಯ ಜಮೀನನ್ನೂ ವಕ್ಫ್ ಆಸ್ತಿ ಎಂದು ಘೋಷಿಸಿ, ನೋಟಿಸ್ ನೀಡಲಾಗುತ್ತಿದೆ. ವಕ್ಫ್ ಸಚಿವರು ಮುಖ್ಯಮಂತ್ರಿಯವರ ಸೂಚನೆ ಇದೆ ಎಂದು ಹೇಳಿಕೊಂಡು ಅಧಿಕಾರಿಗಳನ್ನು ಬೆದರಿಸಿ ಈ ಕೆಲಸ ಮಾಡಿಸುತ್ತಿದ್ದಾರೆ. ವಕ್ಫ್ ಮಂಡಳಿಯ ದೌರ್ಜನ್ಯದಿಂದ ರಾಜ್ಯದ ಜನರು ನಲುಗಿಹೋಗಿದ್ದಾರೆ’ ಎಂದರು.
ಕಾಂಗ್ರೆಸ್ ಕಾರಣ: ಈ ಮೊದಲು ದಾನದ ರೂಪದ ಆಸ್ತಿಗಳನ್ನು ಮಾತ್ರ ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, 1995ರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಮಂಡಳಿಗೆ ಆಸ್ತಿ ಸ್ವಾಧೀನದ ಅಧಿಕಾರ ನೀಡಿತು. 2013ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ವಕ್ಫ್ ಕಾಯ್ದೆಗೆ ಮತ್ತೊಂದು ತಿದ್ದುಪಡಿ ತಂದಿತು. ವಕ್ಫ್ ಮಂಡಳಿಯು ತನ್ನದೆಂದು ಪರಿಭಾವಿಸುವ ಆಸ್ತಿಯ ಹಕ್ಕನ್ನು ಅದು ಹೊಂದಲು ಅವಕಾಶ ನೀಡಲಾಯಿತು. ಕಾಂಗ್ರೆಸ್ ಸರ್ಕಾರ ತಂದ ಈ ತಿದ್ದುಪಡಿಯೇ ಈಗ ದೇಶದಾದ್ಯಂತ ಜನರ ರಕ್ತ ಹೀರುತ್ತಿದೆ ಎಂದು ಅಶೋಕ ವಾಗ್ದಾಳಿ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಯ ಆಸ್ತಿ ಒತ್ತುವರಿ ಆರೋಪದ ಮೇಲೆ ನೋಟಿಸ್ ನೀಡಿರುವ ಪ್ರಕರಣಗಳನ್ನು ಸರಣಿಯೋಪಾದಿಯಲ್ಲಿ ಉಲ್ಲೇಖಿಸಿದ ಅವರು, ರಾಜ್ಯದಲ್ಲಿ 1.11 ಲಕ್ಷ ಎಕರೆ ವಿಸ್ತೀರ್ಣದ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಅದರಲ್ಲಿ 84,000 ಎಕರೆ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳಿವೆ ಎಂದು ಅಂಕಿಅಂಶ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.