ADVERTISEMENT

ನನ್ನ ತಲೆದಂಡದ ಪ್ರಶ್ನೆಯೇ ಬರುವುದಿಲ್ಲ: ತಿಮ್ಮಾ‍ಪುರ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 16:29 IST
Last Updated 28 ನವೆಂಬರ್ 2024, 16:29 IST
ಆರ್‌.ಬಿ. ತಿಮ್ಮಾಪುರ
ಆರ್‌.ಬಿ. ತಿಮ್ಮಾಪುರ   

ಬೆಂಗಳೂರು: ‘ನನ್ನ ತಲೆದಂಡದ ಪ್ರಶ್ನೆಯೇ ಬರುವುದಿಲ್ಲ. ನಾನು ತಪ್ಪು ಮಾಡಿಲ್ಲ. ಏನಾದರೂ ಇದ್ದರೆ ಅದನ್ನು ಎದುರಿಸುತ್ತೇನೆ. ಹಿಂದೆಯೂ ಅಬಕಾರಿ ಮಂತ್ರಿ ಆಗಿದ್ದವರ ಮೇಲೆ ಇಂತಹ ಆರೋಪಗಳು ಬಂದಿದ್ದವು. ಎಲ್ಲ ಮಂತ್ರಿಗಳ ಮೇಲೆಯೂ ಆರೋಪ ಬಂದಿದೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಬಕಾರಿ ಇಲಾಖೆ ಮೇಲೆ ಇಂತಹ ಆರೋಪಗಳು ಆಗಾಗ ಕೇಳಿ ಬರುತ್ತವೆ. ಇಲಾಖೆಯಲ್ಲಿ ಕೆಲವು ವಿಚಾರಗಳನ್ನು ಸರಿ ಮಾಡಬೇಕು. ಅದನ್ನು ಮಾಡುತ್ತೇನೆ’ ಎಂದರು.

‘ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶ ನೀಡಲಾಗುವುದು’ ಎಂದು  ಹೇಳಿದರು. ‘ಇಲಾಖೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕು. ವರ್ಗಾವಣೆಗೆ ಕೌನ್ಸೆಲಿಂಗ್ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ. ಮದ್ಯದಂಗಡಿಗಳಿಗೆ ಅನುಮತಿ ನೀಡುವ ವಿಚಾರದಲ್ಲಿಯೂ ಕೆಲವು ಗೊಂದಲಗಳಿವೆ. ಈ ಎಲ್ಲ ವಿಚಾರಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ADVERTISEMENT

ಲಂಚ ಕೇಳಿದ ಆಡಿಯೊ ಬಿಡುಗಡೆಯಾಗಿದೆ: ಅಶೋಕ

‘ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಆಡಿಯೊ ಈಗ ಬಿಡುಗಡೆ ಆಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆಗಿರುವುದರಿಂದ ಶೇ 50 ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧವೂ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಭ್ರಷ್ಟಾಚಾರ ನಡೆದಿರುವುದಕ್ಕೆ ಎಲ್ಲ ಸಾಕ್ಷ್ಯ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದೂ ಅವರು ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.