ADVERTISEMENT

ಹೊಲದಲ್ಲೇ ಮೊಳಕೆಯೊಡೆಯುತ್ತಿದೆ ರಾಗಿ!

ರಾಗಿ ಕಣಜದಲ್ಲಿ ಅಕಾಲಿಕ ಮಳೆ ತಂದ ಸಂಕಷ್ಟ l ಕೊಯ್ಲು ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 21:25 IST
Last Updated 17 ನವೆಂಬರ್ 2020, 21:25 IST
ರಾಮನಗರದ ಪಾಲಭೋವಿದೊಡ್ಡಿ ಗ್ರಾಮದಲ್ಲಿ ಮಳೆಯಿಂದಾಗಿ ಭತ್ತ ಹಾಳಾಗಿರುವುದನ್ನು ತೋರಿಸುತ್ತಿರುವ ಶಾರದಮ್ಮ
ರಾಮನಗರದ ಪಾಲಭೋವಿದೊಡ್ಡಿ ಗ್ರಾಮದಲ್ಲಿ ಮಳೆಯಿಂದಾಗಿ ಭತ್ತ ಹಾಳಾಗಿರುವುದನ್ನು ತೋರಿಸುತ್ತಿರುವ ಶಾರದಮ್ಮ   

ಬೆಂಗಳೂರು: ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣ ‘ರಾಗಿ ಕಣಜ’ದಲ್ಲಿ ಆತಂಕದ ಕಾರ್ಮೋಡ ಸೃಷ್ಟಿಸಿದೆ.

ರಾಗಿ ಹೆಚ್ಚಾಗಿ ಬೆಳೆಯುವ ಹಳೆಯ ಮೈಸೂರು ಭಾಗದಲ್ಲಿ ಕಟಾವಿಗೆ ಬಂದ ಕಾಳು ತುಂಬಿದ ರಾಗಿ ತೆನೆಗಳು ನೆಲಕ್ಕೊರಗಿ ಹೊಲದಲ್ಲಿಯೇ ಮೊಳಕೆಯೊಡೆಯುತ್ತಿವೆ.

ರೈತರು ರಾಗಿ ಕಟಾವು ಮುಗಿಸಿ ತೆನೆ ರಾಶಿ ಮಾಡಲು ಸಜ್ಜಾಗುವ ವೇಳೆಗೆ ಸರಿಯಾಗಿ ಮಳೆ ಶುರುವಾಗಿದೆ. ಕಟಾವು ಮಾಡಿದ ಫಸಲು ಹೊಲದಲ್ಲೇ ಉಳಿದಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಸುರಿದರೆ ಕಟಾವು ಮಾಡಿದ ಬೆಳೆಗೆ ಬೂಷ್ಟು ಹಿಡಿಯುತ್ತದೆ. ಹೀಗಾದರೆ ಕೈಗೆ ಬಂದ ತುತ್ತು ಬಾಯಿಗೆ ಬರಲ್ಲ ಎಂದು ರೈತರು ಕಂಗಾಲಾಗಿದ್ದಾರೆ.

ADVERTISEMENT

ರಾಮನಗರ ಜಿಲ್ಲೆಯಲ್ಲಿ ಶೇ 65ರಷ್ಟು ಭೂಮಿಯಲ್ಲಿ (ಸುಮಾರು70 ಸಾವಿರ ಹೆಕ್ಟೇರ್‌) ರಾಗಿ ಬೆಳೆಯಲಾಗಿದೆ. ಶೇ 25-30 ರೈತರು ಈಗಾಗಲೇ ಕಟಾವು ಮುಗಿಸಿ ತೆನೆ ರಾಶಿ ಮಾಡಿದ್ದಾರೆ. ಇನ್ನುಳಿದ ರೈತರು ಮಳೆ ನಿಲ್ಲುವುದನ್ನೇ ಕಾಯತೊಡಗಿದ್ದಾರೆ.

ಅರ್ಕಾವತಿ ನದಿ ಪಾತ್ರದಲ್ಲಿ ನೀರಾವರಿ ಆಶ್ರಯಿಸಿ ಬೆಳೆದಿರುವ ಭತ್ತವನ್ನು ಅಲ್ಲಲ್ಲಿ ಕೊಯ್ಲು ಮಾಡುತ್ತಿದ್ದು, ಮಳೆ ನೀರು ಗದ್ದೆಯಲ್ಲಿ ನಿಂತು ಬೆಳೆ ಹಾಳಾಗುತ್ತಿದೆ.

ನಿರೀಕ್ಷೆ ಮೀರಿ ಬಿತ್ತನೆ: ಕೋಲಾರ ಜಿಲ್ಲೆ ಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ರಾಗಿ ಬಿತ್ತನೆಯಾಗಿದ್ದು, ಸಹಜವಾಗಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು.

ಆದರೆ, ಸೊಂಪಾಗಿ ಬೆಳೆದ ರಾಗಿ ಕೊಯ್ಲಿಗೆ ಜಡಿ ಮಳೆ ಅಡ್ಡಿಯಾಗಿದೆ. ಮತ್ತೊಂದೆಡೆ ಕಟಾವಾಗಿರುವ ತೆನೆಗಳನ್ನು ಬಡಿಯಲು ಮಳೆ ಬಿಡುವು ಕೊಡುತ್ತಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 67,590 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿಯಿತ್ತು. ಉತ್ತಮ ಮಳೆಯಾಗಿದ್ದರಿಂದ ನಿಗದಿತ ಗುರಿ ಮೀರಿ 68,505 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು.

ರಾಗಿಗೆ ಬೂಷ್ಟು ಕಾಟ: ತುಮಕೂರು ಜಿಲ್ಲೆಯಲ್ಲಿ ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ,ಕೊರಟಗೆರೆ ಹಾಗೂ ಶಿರಾದ ಕೆಲ ಭಾಗಗಳಲ್ಲಿ ಕೂಯ್ಲಿಗೆ ಬಂದಿದ್ದ ರಾಗಿ ತೆನೆ ನೆಲಕ್ಕೆ ಉರುಳಿದ್ದು, ತೇವಾಂಶ ಹೆಚ್ಚಾದ ಕಾರಣ ಬೂಷ್ಟು ಬರಲಾರಂಭಿಸಿದೆ.

ಜಿಲ್ಲೆಯಲ್ಲಿ ಹೆಚ್ಚು ರಾಗಿ ಬೆಳೆಯುವ ಕುಣಿಗಲ್, ತುರುವೇಕೆರೆ ತಾಲ್ಲೂಕಿನಲ್ಲಿ ಮಳೆಯಿಂದ ಬೆಳೆಗೆ ಹೆಚ್ಚಿನ ಹಾನಿಯಾಗಿಲ್ಲ. ಎರಡು ದಿನಗಳಿಂದ ಸತತ ಮಳೆಯಾಗಿದ್ದು, ಕಟಾವು ಮಾಡಿದ ರಾಗಿ ತೆನೆ ಒಣಗಿಸಲು ರೈತರು ಪರದಾಡುತ್ತಿದ್ದಾರೆ.

ಹೆಚ್ಚಿನ ಹಾನಿ ಮಾಡದ ಮಳೆ

ಮೈಸೂರು: ಮೈಸೂರು ಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗಿದ್ದು, ಹೆಚ್ಚಿನ ಬೆಳೆ ನಷ್ಟ ಆಗಿಲ್ಲ. ಹಾಸನದಲ್ಲಿ ತುಂತುರು ಮಳೆಯಾಗಿದ್ದು, ರಾಗಿ ಬೆಳೆಗೆ ಯಾವುದೇ ಹಾನಿ ಆಗಿಲ್ಲ. ರಾಗಿ ಕೊಯ್ಲಿಗೆ ಬಂದಿದ್ದು, ಕಟಾವು ನಡೆಯದಿರುವ ಕಡೆ ಮಾತ್ರ ಸ್ವಲ್ಪ ಹಾನಿಯಾಗಿದೆ. ಒಂದು ವೇಳೆ ಮಳೆ ಜೋರಾಗಿ ಬಂದಿದ್ದರೆ ಹೆಚ್ಚಿನ ಹಾನಿಯಾಗುತ್ತಿತ್ತು ಎಂದು ರೈತ ಮುಖಂಡ ಅತ್ತಹಳ್ಳಿ ದೇವರಾಜ್ ಹೇಳಿದ್ದಾರೆ.

ಟಾರ್ಪಲ್‌ ಸಮಸ್ಯೆ!

ಕಟಾವಾಗಿರುವ ತೆನೆಗಳ ರಾಶಿಗೆ ಟಾರ್ಪಲ್‌ ಮುಚ್ಚಿ ಬಿಸಿಲು ಬರುವುದನ್ನೇ ರೈತರು ಕಾಯುತ್ತಿದ್ದಾರೆ. ಹೆಚ್ಚಿನ ರೈತರ ಬಳಿ ಟಾರ್ಪಲ್‌ ಇಲ್ಲ. ಹಾಗಾಗಿ ತೆನೆಗಳು ಮಳೆಯಲ್ಲಿ ನೆನೆದು ಮೊಳಕೆ ಬರುತ್ತಿವೆ.

ಕೋಲಾರ ಜಿಲ್ಲಾ ಕೃಷಿ ಇಲಾಖೆಗೆ ಮಂಗಳವಾರವಷ್ಟೇ 6 ಸಾವಿರ ರೈತರಿಗೆ ಸಬ್ಸಿಡಿ ದರದಲ್ಲಿ ಟಾರ್ಪಲ್‌ ವಿತರಿಸಲು ಅನುದಾನ ಬಿಡುಗಡೆಯಾಗಿದೆ.

ಅರ್ಜಿ ಕರೆದು ಫಲಾನುಭವಿಗಳನ್ನು ಗುರುತಿಸಿ ಟಾರ್ಪಲ್‌ ವಿತರಣೆ ಮಾಡಲು ಕನಿಷ್ಠ 1 ತಿಂಗಳ ಕಾಲಾವಕಾಶ ಬೇಕು. ಅಷ್ಟರಲ್ಲಿ ರಾಗಿ ಬೆಳೆ ಕಟಾವು ಪೂರ್ಣಗೊಂಡಿರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.