ರಾಹುಲ್ ಗಾಂಧಿ
– ಪಿಟಿಐ ಚಿತ್ರ
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ಅಳಿಸಿ ಹಾಕಲಾಗುತ್ತಿದೆ ಎನ್ನುವ ಅರೋಪ ಸಂಬಂಧ ದಾಖಲಾಗಿರುವ ದೂರುಗಳ ಬಗ್ಗೆ ಕರ್ನಾಟಕ ಸಿ.ಐ.ಡಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಮಾಹಿತಿ ಕೋರಿ 18 ತಿಂಗಳಿನಲ್ಲಿ 18 ಬಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದರೂ, ಯಾವುದೇ ಮಾಹಿತಿ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿ ‘ಇಂದಿರಾ ಭವನ’ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕರ್ನಾಟಕದ ಆಳಂದದಲ್ಲಿ 6 ಸಾವಿರ ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿಯು 18 ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸಿದ ಒಟಿಪಿ ಮಾಹಿತಿ ನೀಡುವಂತೆ ಸಿಐಡಿ ಆಯೋಗವನ್ನು ಕೇಳಿದೆ. ಆದರೆ ಆಯೋಗವು ಅದನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಒಂದೊಮ್ಮೆ ಆಯೋಗ ಅದನ್ನು ನೀಡಿದರೆ, ಈ ಕೃತ್ಯದ ಹಿಂದಿರುವ ವ್ಯಕ್ತಿಯ ಮನೆಬಾಗಿಲಿಗೆ ಪೊಲೀಸರು ಹೋಗುತ್ತಾರೆ ಎಂಬುದು ಅವರಿಗೂ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂದು ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಅವರು ನೀಡುತ್ತಿಲ್ಲವೆಂದರೆ ಅವರು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದೇ ಅರ್ಥ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
(ಪಿಟಿಐ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.