ADVERTISEMENT

‘ರಾಹುಲ್ ಸುಳ್ಳು ಹೇಳುವ ಸಂಚಾರಿ ಯಂತ್ರ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:58 IST
Last Updated 3 ಏಪ್ರಿಲ್ 2019, 19:58 IST

ಬೆಂಗಳೂರು: ‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಆಗಿದ್ದು, ಅದನ್ನು ದಡ ಸೇರಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬರೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅವರು ಸುಳ್ಳು ಹೇಳುವ ಸಂಚಾರಿ ಯಂತ್ರ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಬುಧವಾರ ಇಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳೇ ತುಂಬಿವೆ. ಬಡವರು ಕಾಂಗ್ರೆಸ್‌ಗೆ ವೋಟ್‌ ಬ್ಯಾಂಕ್‌ ಸರಕು. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದು, ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೀಡುವ ₹5 ಸಾವಿರ ಹಣಕ್ಕೆ ಒಂದೂವರೆ ವರ್ಷ ಕಾಯಬೇಕಾದ ಸ್ಥಿತಿ ಇದೆ. ಚುನಾವಣೆ ಸಮಯದಲ್ಲಷ್ಟೇ ಬಡವರ ಬಗ್ಗೆ ಹುಸಿ ಕಾಳಜಿ ವ್ಯಕ್ತಪಡಿಸುತ್ತಾರೆ’ ಎಂದರು.

‘ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಭಾರತ ಹಿಂದೂಗಳ ರಾಷ್ಟ್ರವೇ ಆಗಿದ್ದು, ಇದರಲ್ಲಿ ಸಂಚು ರೂಪಿಸಬೇಕಾದ್ದು ಏನೂ ಇಲ್ಲ. ಒಂದೊಂದು ಸಮುದಾಯದ ಬಳಿ ದೇವೇಗೌಡರು ಒಂದೊಂದು ರೀತಿ ಹೇಳುತ್ತಾರೆ’ ಎಂದು ಟೀಕಿಸಿದರು.

ADVERTISEMENT

‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಕ್ಕೆ ಟೈಂ ಬಾಂಬ್‌ ಇಡಲಾಗಿದೆ. ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಅದು ಸ್ಫೋಟಗೊಳ್ಳಲಿದೆ. ಅದನ್ನು ಇಟ್ಟಿರುವುದು ನಾವಲ್ಲ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.