ADVERTISEMENT

ಪತ್ರಿಕೆಗಳಿಗೆ ಜಾಹೀರಾತು | ರಾಹುಲ್‌ ಗಾಂಧಿ ಪಾತ್ರವಿಲ್ಲ: ಶಶಿಕಿರಣ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 16:06 IST
Last Updated 4 ಡಿಸೆಂಬರ್ 2025, 16:06 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಯಾವುದೇ ಆಧಾರವಿಲ್ಲ’ ಎಂದು ರಾಹುಲ್‌ ಗಾಂಧಿ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಅರುಹಿದರು.

‘ಈ ಸಂಬಂಧ ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಎಸ್‌.ಕೇಶವಪ್ರಸಾದ್‌ ಸಲ್ಲಿಸಿರುವ ಖಾಸಗಿ ದೂರನ್ನು ರದ್ದುಪಡಿಸಬೇಕು’ ಎಂದು ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಹುಲ್‌ ಗಾಂಧಿ ಪರ ಪದಾಂಕಿತ ಹಿರಿಯ ವಕೀಲ ಕೆ.ಶಶಿಕಿರಣ ಶೆಟ್ಟಿ, ‘ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮುಖ್ಯ ವಾಹಿನಿಯ ಆಂಗ್ಲ ಮತ್ತು ಕನ್ನಡ ದಿನಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್‌ ಜಾಹೀರಾತು ನೀಡಿತ್ತು. ಆದರೆ, ಇದರಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಪಾತ್ರವಿಲ್ಲ. ಟ್ವೀಟ್‌ ಅನ್ನು ರಿ–ಟ್ವೀಟ್‌ ಮಾಡಿದ ಆರೋಪವನ್ನಷ್ಟೇ ರಾಹುಲ್‌ ವಿರುದ್ಧ ಹೊರಿಸಲಾಗಿದೆ. ಅಷ್ಟಕ್ಕೂ ಈ ದೂರು ಅಥವಾ ಸ್ವಯಂ ಹೇಳಿಕೆಯಲ್ಲಿ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳೇ ಇಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ಪತ್ರಿಕೆಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಜಾಹೀರಾತು ನೀಡಿದೆಯೇ ವಿನಃ ರಾಹುಲ್‌ ಗಾಂಧಿಯಲ್ಲ. ಮಾನಹಾನಿ ಪ್ರಕರಣದಲ್ಲಿ ಯಾರು ಸುದ್ದಿ ಅಥವಾ ಜಾಹೀರಾತು ಪ್ರಕಟಿಸುತ್ತಾರೋ ಅವರನ್ನೂ ಪಕ್ಷಕಾರರನ್ನಾಗಿ ಮಾಡಬೇಕು. ಆದರೆ, ದೂರುದಾರರು ಜಾಹೀರಾತನ್ನು ಪ್ರಕಟಿಸಿದ ಪತ್ರಿಕೆಗಳ ಸಂಪಾದಕರನ್ನು ಪಕ್ಷಕಾರರನ್ನಾಗಿ ಮಾಡಿಲ್ಲ. ಜಾಹೀರಾತು ನೀಡಲು ಯಾರು ಅಧಿಕಾರ ನೀಡಿದ್ದಾರೆ ಮತ್ತು ಅವುಗಳನ್ನು ಯಾವಾಗ ನೀಡಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿಲ್ಲ’ ಎಂದರು.

‘ಜಾಹೀರಾತು ನೀಡಿದ್ದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವ ಅನರ್ಹಗೊಂಡಿತ್ತು. ಪಕ್ಷದಲ್ಲೂ ಅವರು ಯಾವುದೇ ಹುದ್ದೆ ಅಥವಾ ಸ್ಥಾನ ಹೊಂದಿರಲಿಲ್ಲ. ವಿವೇಚನಾರಹಿತ ಮತ್ತು ಆಧಾರರಹಿತ ಆರೋಪಗಳ ಈ ಪ್ರಕರಣವನ್ನು ವಜಾಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ದೂರುದಾರ ಬಿಜೆಪಿ ‍ಪರ ಹಾಜರಿದ್ದ ಹೈಕೋರ್ಟ್‌ ವಕೀಲ ಎಂ.ವಿನೋದ್‌ ಕುಮಾರ್‌ ‘ಜಾಹೀರಾತು ನೀಡುವ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದರು. ರಿ–ಟ್ವೀಟ್‌ ಮಾಡುವುದು ಮಾನಹಾನಿ ವ್ಯಾಪ್ತಿಗೇ ಒಳಪಡುತ್ತದೆ. ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ಕಾಂಗ್ರೆಸ್‌ ಪಕ್ಷವು, ಬಿಜೆಪಿಯ ಮಾನಹಾನಿ ಮಾಡಲು ಸ್ವಯಂಪ್ರೇರಿತವಾಗಿ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ’ ಎಂದರು.

‘ಇಲ್ಲಿ ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸಿಲ್ಲ. ಹೀಗಾಗಿ, ಪತ್ರಿಕೆಗಳ ಸಂಪಾದಕರನ್ನು ಪಕ್ಷಕಾರರನ್ನಾಗಿ ಮಾಡಿಲ್ಲ. ಆದಾಗ್ಯೂ, ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳನ್ನು ಹೈಕೋರ್ಟ್‌ ಮುಂದಿರಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ದೂರಿನ ಆಧಾರದಲ್ಲಿ ರಾಹುಲ್‌ ಗಾಂಧಿಯವರ ಪಾತ್ರ ಮತ್ತು ಸ್ವಯಂ ಹೇಳಿಕೆಯನ್ನು ಅಡಕಗೊಳಿಸಬೇಕು’ ಎಂದು ಆದೇಶಿಸಿತು. ಉಭಯ ಪಕ್ಷಕಾರರಿಗೂ ತಮ್ಮ ವಾದಾಂಶಗಳನ್ನು ಸಲ್ಲಿಸಲು ನಿರ್ದೇಶಿಸಿ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.