ADVERTISEMENT

ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು: ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2022, 9:53 IST
Last Updated 15 ಜೂನ್ 2022, 9:53 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಇಂದಿರಾ ಗಾಂಧಿ ಕಾಲದಿಂದಲೇ ಗೂಂಡಾರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿ ಇತ್ತು. ಅದೀಗ ಕರ್ನಾಟಕದಲ್ಲಿ ಮುಂದುವರಿಯುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಗೂಂಡಾಗಿರಿ ಎಂಬುದು ಕಾಂಗ್ರೆಸ್ ನಾಯಕರಿಗೆ ವಂಶ ಪಾರಂಪರ್ಯವಾಗಿ ಬಂದ ಉಡುಗೊರೆ. ಇಂದಿರಾ ಗಾಂಧಿ ಕಾಲದಿಂದಲೇ ಗೂಂಡಾರಾಜ್ ವ್ಯವಸ್ಥೆ ಅಸ್ತಿತ್ವದಲ್ಲಿ ಇತ್ತು. ಅದೀಗ ಕರ್ನಾಟಕದಲ್ಲಿ ಮುಂದುವರಿಯುತ್ತಿದೆ' ಎಂದು ಟೀಕಿಸಿದೆ.

‘ದೆಹಲಿಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಬಂಧನಕ್ಕೆ ಒಳಗಾದ ಶಾಸಕ, ಸಂಸದರಿಗೂ ಗೂಂಡಾಗಿರಿಯ ಘನ ಇತಿಹಾಸ ಇದೆ‌. ಒಬ್ಬರು ಕನಕಪುರದ ಅಘೋಷಿತ ರೌಡಿ, ಇನ್ನೊಬ್ಬರು 'ಗೂಂಡಾರಾಯರು' ಎಂದು ಬಿಜೆಪಿ ಟ್ವೀಟಿಸಿದೆ.

ADVERTISEMENT

‘ಯಥಾ ರಾಜ, ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ. ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ. ಇ‌ವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ' ಎಂದು ವಾಗ್ದಾಳಿ ನಡೆಸಿದೆ.

‘ಪಬ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ‌‌ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ. ಎಲ್ಲರೂ ಗೂಂಡಾಗಿರಿಯ ತುಣುಕುಗಳೇ’ ಎಂದು ಟೀಕಿಸಿದೆ.

‘ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು’ ಎಂದು ಟ್ವೀಟ್‌ ಮಾಡಿದೆ.

‘ಕನಕಪುರದ ಬಂಡೆ ಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು. ಇವರ ಹಾದಿಯನ್ನೇ ಯುವ ಅಧ್ಯಕ್ಷರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿರುವವರಲ್ಲೂ ಐಪಿಸಿ ಸೆಕ್ಷನ್ ಬೋರ್ಡ್ ಹಾಕಿಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ’ ಎಂದು ತಿಳಿಸಿದೆ.

‘ಕೈ ನಾಯಕರು ಶ್ರಮಿಕರಿಗೆ, ದಲಿತರಿಗೆ, ಮಹಿಳೆಯರಿಗೆ ಸಹಾಯ ಹಸ್ತ ಚಾಚುವುದಿಲ್ಲ. ಅವರದ್ದೇನಿದ್ದರೂ ಕೈ ಕೈ ಮಿಲಾಯಿಸುವುದಷ್ಟೇ. ಅಣ್ಣನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು. ಕನಕಪುರವಿರಲಿ, ಬೆಂಗಳೂರಿರಲಿ ಅಥವಾ ದೆಹಲಿ ಇರಲಿ ಗೂಂಡಾಗಿರಿ ಮಾಡುವುದೇ ಇವರ ಪ್ರವೃತ್ತಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.