ಆರ್. ಅಶೋಕ
ಬೆಂಗಳೂರು: ‘ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ಯಾರೋ ಬರೆದುಕೊಟ್ಟಿದ್ದನ್ನು ನಂಬಿ ಆರೋಪ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮುಂದೆ ಮಾತಾಡುತ್ತಾರೆ, ದಾಖಲೆಗಳನ್ನು ನೀಡುವುದಿಲ್ಲ. ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಮಾಡಿದ್ದ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಈಗ ಆಳಂದ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ’ ಎಂದು ದೂರಿದರು.
‘ಮಾಲೂರು ಕ್ಷೇತ್ರದಲ್ಲಿ ಮತ ಕಳ್ಳತನ ನಡೆದಿದ್ದು ಸಾಬೀತಾಗಿದೆ. ಕಾಂಗ್ರೆಸ್ ಶಾಸಕರ ಸದಸ್ಯತ್ವವೇ ರದ್ದಾಗಿದೆ. ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ. ಇಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಅಫಿಡವಿಟ್ ನೀಡಿದ್ದರು. ಮಾಲೂರು ಕ್ಷೇತ್ರದಲ್ಲಿ ನಡೆದ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡಬೇಕು’ ಎಂದು ಸವಾಲು ಹಾಕಿದರು.
ಬಿಹಾರದಲ್ಲಿ ಸೋಲುತ್ತೇವೆಂದು ಕಾಂಗ್ರೆಸ್ ನಾಯಕರಿಗೆ ಭ್ರಮನಿರಸನವಾಗಿದೆ. ಅದಕ್ಕಾಗಿ ಕೇವಿಯಟ್ ರೀತಿ ಮೊದಲೇ ಆರೋಪ ಮಾಡುತ್ತಿದ್ದಾರೆ. ‘ಹಿಟ್ ಆ್ಯಂಡ್ ರನ್’ ರೀತಿ ನಡೆದುಕೊಳ್ಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನಲ್ಲೇ ಈ ಬಗ್ಗೆ ಮಾತನಾಡಬೇಕಿತ್ತು. ಚುನಾವಣಾ ಆಯೋಗಕ್ಕೆ ದಾಖಲೆ ನೀಡಬೇಕಿತ್ತು. ಚುನಾವಣಾ ಆಯೋಗವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ. ದಾಖಲೆ ಇಲ್ಲದ ಕಾರಣ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಾರೆ ಎಂದು ದೂರಿದರು.
‘ಮುಸ್ಲಿಂ ಸಮುದಾಯ ಅಕ್ರಮದಲ್ಲಿ ಭಾಗಿಯಾಗಿದೆ. ಬಾಂಗ್ಲಾ ದೇಶದವರು ಇಲ್ಲಿಗೆ ಬಂದು ಮತದಾನ ಮಾಡುತ್ತಾರೆ. ಅಂಥವರಿಗೆ ಮತದಾರರ ಗುರುತಿನ ಚೀಟಿ ನೀಡಿದವರು ಯಾರು? ದೇಶದ ಭದ್ರತೆಯ ದೃಷ್ಟಿಯಿಂದ ಅಂಥವರನ್ನು ವಾಪಸ್ ಕಳಿಸಬೇಕು. ಆದರೆ, ಕಾಂಗ್ರೆಸ್‌ಗೆ ದೇಶದ ಭದ್ರತೆಗಿಂತ ಮತಬ್ಯಾಂಕ್ ಮುಖ್ಯ. ಒಬ್ಬರಿಗೆ ಒಂದೇ ವೋಟು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.