ADVERTISEMENT

ಡಿಕೆಶಿ, ಸಿದ್ದರಾಮಯ್ಯ ‘ಕೈ’ಗಳನ್ನು ಹಿಡಿದು ಯಾತ್ರೆಯ ನಗಾರಿ ಬಾರಿಸಿದ ರಾಹುಲ್‌

ಜನರ ಧ್ವನಿ ಅಡಗಿಸುವ ಸಾಮರ್ಥ್ಯ ಯಾರಿಗೂ ಇಲ್ಲ: ರಾಹುಲ್‌ ಗಾಂಧಿ

ರಾಜೇಶ್ ರೈ ಚಟ್ಲ
Published 30 ಸೆಪ್ಟೆಂಬರ್ 2022, 20:38 IST
Last Updated 30 ಸೆಪ್ಟೆಂಬರ್ 2022, 20:38 IST
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಲುಪಿದ ಭಾರತ್ ಜೋಡೊ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಜಿ. ಪರಮೇಶ್ವರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಲುಪಿದ ಭಾರತ್ ಜೋಡೊ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಜಿ. ಪರಮೇಶ್ವರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ/ ಎಂ.ಎಸ್. ಮಂಜುನಾಥ್   

ಗುಂಡ್ಲುಪೇಟೆ (ಚಾಮರಾಜನಗರ): ಇನ್ನು ಏಳು ತಿಂಗಳಲ್ಲಿ ರಾಜ್ಯ ವಿಧಾನಸಭೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಕೋಮುವಾದ, ದ್ವೇಷ ರಾಜಕಾರಣ, ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ, ಜನ ಸಮುದಾಯಗಳನ್ನು ‘ಒಗ್ಗೂಡಿಸಲು’ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡ ‘ಭಾರತ್‌ ಜೋಡೊ’ ಶುಕ್ರವಾರ ಇಲ್ಲಿಂದ ರಾಜ್ಯದಲ್ಲಿ ಆರಂಭಗೊಂಡಿತು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಂಭಾಗದ ಮೈದಾನದಲ್ಲಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ‘ಕೈ’ಗಳನ್ನು ಹಿಡಿದು ರಾಹುಲ್ ಯಾತ್ರೆಯ ನಗಾರಿ ಬಾರಿಸಿದರು. ಅಷ್ಟೇ ಅಲ್ಲ, ಕಾರ್ಯಕರ್ತರನ್ನು ಬಡಿದೆಬ್ಬಿಸಿ, ಮತದಾರ ಪ್ರಭುಗಳನ್ನು ಪುನರ್‌ ಸಂಪರ್ಕಿಸುವ ಚುನಾವಣಾ ರಾಜಕಾರಣದ ‘ಅಸ್ತ್ರ’ವಾದ ಈ ಯಾತ್ರೆಯಲ್ಲಿ 'ಕೈ' ಹಿಡಿದುಕೊಂಡೇ ಒಂದಷ್ಟು ದೂರ ಹೆಜ್ಜೆ ಹಾಕಿ, ಒಗ್ಗಟ್ಟಿನಿಂದ ಮುನ್ನಡೆಯುವಂತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಸೂಚಿಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ 3,570 ಕಿ.ಮೀ ದೂರದವರೆಗೆ ನಡೆಯುವ ಈ ಯಾತ್ರೆಯಲ್ಲಿ, ತಮಿಳುನಾಡು ಮತ್ತು ಕೇರಳದಲ್ಲಿ ಸುಮಾರು 500 ಕಿ.ಮೀ ಹೆಜ್ಜೆ ಹಾಕಿರುವ ರಾಹುಲ್‌, ತಮಿಳುನಾಡಿನ ಗುಡಲೂರು ಮೂಲಕ ರಾಜ್ಯದ ಗಡಿ ಪ್ರವೇಶಿಸಿದರು.

ADVERTISEMENT

ರಾಹುಲ್‌ ಸ್ವಾಗತಕ್ಕೆ ಇಲ್ಲಿ ಸೇರಿದ ಜನ, ಸಿಕ್ಕಿದ ಸ್ವಾಗತ– ಸಂಭ್ರಮ ‘ಕೈ’ ನಾಯಕರಲ್ಲಿ ಹುಮ್ಮಸ್ಸು, ಹುರುಪು ಮೂಡಿಸಿತು.

ಮೈದಾನದಲ್ಲಿ ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌, ‘ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿಚಾರಧಾರೆಗಳಿಂದ ಹಬ್ಬುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಹೋರಾಟ ಮಾಡುವುದೇ ಈ ಯಾತ್ರೆಯ ಉದ್ದೇಶ. ಯಾವುದೇ ಶಕ್ತಿಯಿಂದ ಈ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ. ಯಾಕೆಂದರೆ, ಇದು ಭಾರತದ ಧ್ವನಿ’ ಎಂದು ಸವಾಲು ಹಾಕಿದರು.

‘ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ. ಸಂಸತ್ತಿನಲ್ಲಿ ನಾವು ಏನಾದರೂ ಹೇಳಲು ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ವಿರೋಧ ಪಕ್ಷದವರನ್ನು ಬಂಧಿಸಲಾಗುತ್ತಿದೆ. ಹೀಗಾಗಿ, ಜನರ ಜತೆ ಸಾವಿರಾರು
ಕಿ.ಮೀ ಹೆಜ್ಜೆ ಹಾಕುವುದೊಂದೇ ವಿರೋಧ ಪಕ್ಷಗಳ ಮುಂದೆ ಉಳಿದಿರುವ ದಾರಿ. ಪಾದಯಾತ್ರೆಯ ಉದ್ದಕ್ಕೂ ಜನರ ಸಮಸ್ಯೆಗಳನ್ನು ಆಲಿಸುತ್ತೇವೆ. ಜನರ ಧ್ವನಿಯನ್ನು ಅಡಗಿಸುವ ಸಾಮರ್ಥ್ಯ ಯಾವುದೇ ಶಕ್ತಿಗಳಿಗೆ ಇಲ್ಲ’ ಎಂದರು.

‘ಈ ಯಾತ್ರೆ ರಾಜಕೀಯ, ವೈಯಕ್ತಿಕ ಲಾಭಕ್ಕೆ ಅಲ್ಲ. ದೇಶವನ್ನು ಬೆಲೆ ಏರಿಕೆಯಿಂದ ಮುಕ್ತಗೊಳಿಸಲು, ಯುವಕರಿಗೆ ಉದ್ಯೋಗ ನೀಡಲು, ಧರ್ಮದ ಹೆಸರಲ್ಲಿ ದ್ವೇಷದ ರಾಜಕಾರಣ ಮಾಡುತ್ತಿರುವವರ ವಿರುದ್ಧ ಸಮರ ಸಾರಲು ರಾಹುಲ್ ಗಾಂಧಿ ಈ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಜೊತೆ ಇರುತ್ತೇವೆ ಎಂಬ ಸಂಕಲ್ಪವನ್ನು ಎಲ್ಲರೂ ಮಾಡಬೇಕು’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.

ಕೈಕುಲುಕಿದ ಚಿಂತಕರು: ವೇದಿಕೆಯಲ್ಲಿ ಲೇಖಕರು, ಚಿಂತಕರು ಕಾಣಿಸಿಕೊಂಡರು. ಸಾಹಿತಿ ದೇವನೂರ ಮಹದೇವ, ವಿಶ್ರಾಂತ ಕುಲಪತಿ ಜಾಫೆಟ್, ಶಿಕ್ಷಣ ತಜ್ಞ ವಿ.‍ಪಿ. ನಿರಂಜನಾರಾಧ್ಯ ಸೇರಿ ಹಲವರು ರಾಹುಲ್‌ ಗಾಂಧಿಯನ್ನು ಸ್ವಾಗತಿಸಿ, ಕೈಕುಲುಕಿದರು. ದೇವನೂರ ಮಹದೇವ ಸಂವಿಧಾನದ ಪುಸ್ತಕವನ್ನು ರಾಹುಲ್‌ಗೆ ನೀಡಿ, ‘ಇದರ ರಕ್ಷಣೆ‌ ನಿಮ್ಮ‌ ಜವಾಬ್ದಾರಿ’ ಎಂದರು. ಸ್ವರಾಜ್‌ ಅಭಿಯಾನದ ಯೋಗೇಂದ್ರ ಯಾದವ್ ಸಂವಿಧಾನದ ಪೀಠಿಕೆಯ ಪ್ರತಿಯನ್ನು‌ ರಾಹುಲ್ ಕೈಗಿತ್ತರು.

ಯಾತ್ರೆಯಲ್ಲಿಯೂ ‘ಪೇಸಿಎಂ’

ಯಾತ್ರೆಯಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧದ ‘ಪೇಸಿಎಂ’ ಅಭಿಯಾನವನ್ನು ಕಾಂಗ್ರೆಸ್‌ ಮುಂದುವರಿಸಿದೆ. ಕೆಲವರ ಕೈಯಲ್ಲಿ ‘ಪೇಸಿಎಂ’ ಧ್ವಜ ಇದ್ದರೆ, ಇನ್ನೂ ಕೆಲವರು ‘ಪೇಸಿಎಂ’ ಲೋಗೊ ಇರುವ ಟೀ ಶರ್ಟ್ ಧರಿಸಿದ್ದರು. ಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಇದ್ದವು. ತಮಟೆ ಸದ್ದಿಗೆ ಕಾರ್ಯಕರ್ತರು ನೃತ್ಯ ಮಾಡಿದರು. ರಾಹುಲ್ ಗಾಂಧಿಗೆ ಜೈಕಾರ ಕೂಗುತ್ತ, ಸಿಳ್ಳೆ, ಚಪ್ಪಾಳೆ ಹೊಡೆದರು. ಪಕ್ಷದ ಬಾವುಟ ಹಾರಿಸಿ, ಫಲಕವನ್ನು ಪ್ರದರ್ಶನ ಮಾಡಿದರು.

ರಾಹುಲ್‌ ‘ಸ್ವಾಗತ’ದಲ್ಲೂ ಗುಂಪುಗಾರಿಕೆ?

ರಾಹುಲ್‌ ಗಾಂಧಿ‌ ಅವರನ್ನು ಸ್ವಾಗತಿಸುವ ವಿಚಾರದಲ್ಲೂ ಕಾಂಗ್ರೆಸ್‌ನ ಬಣ ರಾಜಕೀಯ ಕಾಣಿಸಿದೆ ಎನ್ನಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ರಾಹುಲ್ ಬರುತ್ತಿದ್ದಂತೆ, ಸಿದ್ದರಾಮಯ್ಯ ಏಕಾಏಕಿ ಹೋಗಿ ಅರಣ್ಯದ ಒಳಗೆ ವಾಹನದಿಂದ ಇಳಿದು ರಾಹುಲ್‌ಗೆ ಸ್ವಾಗತ ಕೋರಿದರು.

ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಬಳಿ ಡಿ.ಕೆ. ಶಿವಕುಮಾರ್ ಸೇರಿ ಕೆಲವು ನಾಯಕರು ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ದಾರಿ ಮಧ್ಯೆ ರೆಸಾರ್ಟ್‌ ಒಂದರಲ್ಲಿ ರಾಹುಲ್ ಜತೆ ಸಿದ್ದರಾಮಯ್ಯ ಉಪಾಹಾರ ಸೇವಿಸಿದರು.

ಬಂಡೀಪುರ ಅರಣ್ಯ ಪ್ರದೇಶದ ಒಳಗಿರುವ ರಸ್ತೆಯಲ್ಲಿ ರಾಹುಲ್‌ ಪ್ರಯಾಣಿಸುತ್ತಿದ್ದ ಕಾರನ್ನು ಸಿದ್ದರಾಮಯ್ಯ ಹತ್ತಿದರು. ಕಾಂಗ್ರೆಸ್‌ನ ನಾಯಕರು ರಸ್ತೆಗಿಳಿದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

‘ಆರು ತಿಂಗಳಲ್ಲಿ ಸರ್ಕಾರ ಬದಲು’

‘ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಸರ್ಕಾರ ಬದಲಾಗಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿಯವರಿಂದ ಈ ಯಾತ್ರೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ಅವರು ನಮ್ಮ ಭಿತ್ತಿಪತ್ರ, ಫ್ಲೆಕ್ಸ್‌ಗಳನ್ನು ಹರಿಯುತ್ತಿದ್ದಾರೆ. ಇದು ಮುಂದುವರಿದರೆ ಬಿಜೆಪಿಯ ಯಾವುದೇ ನಾಯಕ ರಾಜ್ಯದಲ್ಲಿ ತಿರುಗಾಡದಂತೆ ಮಾಡುವ ಶಕ್ತಿ ಕಾಂಗ್ರೆಸ್ ಕಾರ್ಯಕರ್ತರಿಗಿದೆ. ಅಷ್ಟೇ ಅಲ್ಲ, ಅವರ ಜತೆ ಶಾಮೀಲಾದರೆ ನಿಮಗೂ ತಕ್ಕ ಪಾಠ ಕಲಿಸುವ ಕಾಲ ಬರಲಿದೆ’ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.‌

‘ಒಬ್ಬ ನಾಯಕ, ಒಂದು ಸಿದ್ಧಾಂತ, ಒಂದು ಚಿಹ್ನೆ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಧರ್ಮ ರಾಜಕಾರಣ, ಕೋಮುವಾದಿ ರಾಜಕಾರಣ, ದ್ವೇಷದ ರಾಜಕಾರಣ ಮಾಡುತ್ತಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಹೀಗೆ ಎಲ್ಲ ವರ್ಗದವರು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಶೇ 40 ಸರ್ಕಾರ ಎಂದು ಜನಜನಿತವಾಗಿದೆ’ ಎಂದರು.

ವಿರೋಧ ಪಕ್ಷಗಳ ಪಾಲಿಗೆ ಮಾಧ್ಯಮಗಳು, ಸಂಸತ್ತನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಜನರ ಬಳಿಗೆ ಹೋಗಲು ಪಾದಯಾತ್ರೆ ಅಲ್ಲದೆ ಬೇರೆ ದಾರಿಯೇ ಇಲ್ಲ

- ರಾಹುಲ್ ಗಾಂಧಿ, ಎಐಸಿಸಿ ನಾಯಕ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ನಮ್ಮನ್ನು ಹತ್ತಿಕ್ಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ.
- ಡಿ.ಕೆ. ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.