ADVERTISEMENT

ಕಾಂಗ್ರೆಸ್‌ ನಾಯಕರಿಂದ 21ರಂದು ರಾಹುಲ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:00 IST
Last Updated 16 ಡಿಸೆಂಬರ್ 2018, 20:00 IST
   

ಬೆಳಗಾವಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿಗೆ ಸಮಯ ನೀಡಿದ್ದು, ರಾಜ್ಯ ಕಾಂಗ್ರೆಸ್‌ ನಾಯಕರು ಇದೇ 21ರಂದು ದೆಹಲಿ ತೆರಳಲಿದ್ದಾರೆ. ಆದರೆ, ಬಹುನಿರೀಕ್ಷಿತ ಸಂಪುಟ ವಿಸ್ತರಣೆ ನಿಗದಿಯಂತೆ 22ರಂದೇ ನಡೆಯಲಿದೆಯೇ ಅಥವಾ ಮತ್ತೆ ಮುಂದೂಡಿಕೆ ಆಗಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಸಂಪುಟ ವಿಸ್ತರಣೆ ಕುರಿತಂತೆ 21ರಂದು ಸಂಜೆ ನಾಲ್ಕು ಗಂಟೆಗೆ ದೆಹಲಿಯಲ್ಲಿ ರಾಹುಲ್‌ ಜೊತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇರಿದಂತೆ ಪಕ್ಷದ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ನಿಗಮ ಮಂಡಳಿಗಳಿಗೆ ಮತ್ತು ಸಂಸದೀಯ ಕಾರ್ಯದರ್ಶಿಗಳ ನೇಮಕದ ಬಗ್ಗೆಯೂ ಕಾಂಗ್ರೆಸ್‌ ನಾಯಕರು ಹೈಕಮಾಂಡ್ ಜೊತೆ ಚರ್ಚಿಸಲಿದ್ದು, ಪಕ್ಷದಿಂದ ಸಂಪುಟ ಸೇರಲಿರುವ ಶಾಸಕರ ಹೆಸರು ಈ ಸಭೆಯಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಕಾಂಗ್ರೆಸ್‍ನ ಪಾಲಿನ ಎಲ್ಲ ಆರು ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕು ಎಂದು ಶಾಸಕರು ಒತ್ತಡ ಹಾಕುತ್ತಿದ್ದಾರೆ. ಆದರೆ, ಇಬ್ಬರು ಹಿರಿಯ ಶಾಸಕರ ಸಹಿತ ನಾಲ್ವರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಬಳಿಕ ಎದುರಾಗಬಹುದಾದ ಅತೃಪ್ತಿ ತಪ್ಪಿಸಲು ಕಾಂಗ್ರೆಸ್‌ನಿಂದ ಆರು ಮತ್ತು ಜೆಡಿಎಸ್‌ನಿಂದ ನಾಲ್ವರು ಶಾಸಕರನ್ನು ಸಂಸದೀಯ ಕಾರ್ಯದರ್ಶಿಗ
ಳಾಗಿ ನೇಮಿಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನ 20 ಮತ್ತು ಜೆಡಿಎಸ್‌ನ 10 ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಿಸಲು ಕೂಡಾ ಈಗಾಗಲೇ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಅತೃಪ್ತಿ ವ್ಯಕ್ತಪಡಿಸಿದ್ದರು. ಸಚಿವ ಸ್ಥಾನ ಸಿಗದಿದ್ದರೆ ಪರ್ಯಾಯ ದಾರಿ ನೋಡಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಸಚಿವಾಕಾಂಕ್ಷಿಗಳ ಈ ನಡೆ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಹೀಗಾಗಿ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಮುಗಿದ ಮರುದಿನವೇ ಸಂಪುಟ ವಿಸ್ತರಣೆ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಹಿರಿಯ ಸದಸ್ಯರಾದ ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ, ಈ. ತುಕಾರಾಂ, ಸಿ.ಎಸ್. ಶಿವಳ್ಳಿ, ಬಿ.ಸಿ. ಪಾಟೀಲ, ಸಂಗಮೇಶ್, ಸುಧಾಕರ್ ಸೇರಿದಂತೆ 20ಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳಿದ್ದು, ಬಹುತೇಕರು ತೀವ್ರ ಲಾಬಿ ನಡೆಸುತ್ತಿದ್ದಾರೆ. ವಿಧಾನಪರಿಷತ್‌ ಸಭಾಪತಿ ಸ್ಥಾನದ ನಿರೀಕ್ಷೆಯಲ್ಲಿದ್ದ ಹಿರಿಯ ಸದಸ್ಯ ಎಸ್.ಆರ್. ಪಾಟೀಲ ಹೆಸರು ಕೂಡಾ ಆಕಾಂಕ್ಷಿಗಳ ಪಟ್ಟಿಗೆ ಸೇರಿದೆ.

‘ಸ್ಥಾನ’ ಹಂಚಿಕೆಯಲ್ಲಿ ಉತ್ತರ ಕರ್ನಾಟಕದವರಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿದೆ. ಹೀಗಾಗಿ, ಈ ಬಾರಿ ಉತ್ತರ ಕರ್ನಾಟಕದ ಎಂ.ಬಿ. ಪಾಟೀಲ ಅಥವಾ ಎಸ್.ಆರ್. ಪಾಟೀಲ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಇದೇ 18ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಅಧಿವೇಶನಕ್ಕೆ ಸಿದ್ದರಾಮಯ್ಯ, ಸಿ.ಎಂ ಗೈರು

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿಗಳು ಸೋಮವಾರ (ಡಿ. 17) ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೆರಳಲಿದ್ದಾರೆ. ಹೀಗಾಗಿ, ಈ ಇಬ್ಬರೂ ಇಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಸೋಮವಾರ ಗೈರಾಗಲಿದ್ದಾರೆ.

ಈ ಮೂರೂ ರಾಜ್ಯಗಳ ನಿಯೋಜಿತ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಪ್ರಮಾಣ ವಚನ ವೇಳೆ ಉಪಸ್ಥಿತರಿರುವಂತೆ ಅವರಿಗೆ ಎಐಸಿಸಿಯಿಂದಲೂ ಆಹ್ವಾನ ಬಂದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮಲೇಷ್ಯಾ ಪ್ರವಾಸ ಕೈಗೊಂಡ ಕಾರಣಕ್ಕೆ ಮೊದಲ ವಾರ ಅಧಿವೇಶನಕ್ಕೆ ಗೈರಾಗಿದ್ದ ಸಿದ್ದರಾಮಯ್ಯ, ಸೋಮವಾರದಿಂದ ಹಾಜರಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ವಿಧಾನಸಭೆ ಕಲಾಪದಲ್ಲಿ ಮಂಗಳವಾರದಿಂದ ಸಿದ್ದರಾಮಯ್ಯ ಭಾಗವಹಿಸಿ, ದೋಸ್ತಿ ಸರ್ಕಾರದ ವಿರುದ್ಧ ಮುಗಿ ಬೀಳಲು ಸಜ್ಜಾಗಿರುವ ಬಿಜೆಪಿಗೆ ಸವಲೊಡ್ಡಲಿರುವುದರಿಂದ ಅಧಿವೇಶನ ರಂಗೇರಲಿದೆ.

‘ಮಹಾಮೈತ್ರಿಯ ಮತ್ತೊಂದು ಮಹಾ ವೇದಿಕೆ’

ಬೆಂಗಳೂರು: ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸೋಮವಾರ ನಡೆಯುವ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ಮಹಾಮೈತ್ರಿಯ ಮತ್ತೊಂದು ವೇದಿಕೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

‘ನಾಳೆ ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣಕ್ಕೆ ಮಹತ್ವದ್ದು. ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್‌ ಮೂಲಕ ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.