ADVERTISEMENT

ರಾಯಚೂರು: ನೀರಿನಲ್ಲಿ ಮಿತಿಮೀರಿದ ರಾಡಿಯಿಂದ ವಾಂತಿಭೇದಿ?

ನಾಗರಾಜ ಚಿನಗುಂಡಿ
Published 17 ಜೂನ್ 2022, 19:45 IST
Last Updated 17 ಜೂನ್ 2022, 19:45 IST
ರಾಯಚೂರಿನ ರಾಂಪುರದಲ್ಲಿರುವ ತುಂಗಭದ್ರಾ ನದಿ ನೀರು ಶುದ್ಧೀಕರಣ ಹಳೆ ಘಟಕ
ರಾಯಚೂರಿನ ರಾಂಪುರದಲ್ಲಿರುವ ತುಂಗಭದ್ರಾ ನದಿ ನೀರು ಶುದ್ಧೀಕರಣ ಹಳೆ ಘಟಕ   

ರಾಯಚೂರು: ನಗರದಲ್ಲಿ ಪೂರೈಕೆಯಾಗುವ ಕುಡಿಯುವ ನೀರಿನಲ್ಲಿ ‘ರಾಡಿ’ ಮತ್ತು ಆಮ್ಲದ ಪ್ರಮಾಣ (ಪಿಎಚ್‌) ಮಿತಿಮೀರಿದ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ.

ಕಲಷಿತ ನೀರು ಕುಡಿದು ಜನರು ವಾಂತಿ–ಭೇದಿಯಿಂದ ಬಳಲುತ್ತಿರುವುದು ಮತ್ತು ಕೆಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀರಿನ ಪರೀಕ್ಷೆ ಮಾಡಿಸಿದೆ.

ರಾಂಪುರ ಜಲ ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕಳೆದ ಮೇ 30ರಂದು ಪರೀಕ್ಷಿಸಿದಾಗ ರಾಡಿ ಪ್ರಮಾಣ 14 ಮತ್ತು ಪಿಎಚ್‌ ಪ್ರಮಾಣ 8.8ರಷ್ಟು ಪತ್ತೆ ಆಗಿದೆ. ನೀರಿನಲ್ಲಿ ರಾಡಿ ಪ್ರಮಾಣ 1 ಮತ್ತು ಪಿಎಚ್‌ ಪ್ರಮಾಣ 6.5 ರಿಂದ 8.5 ರವರೆಗೆ ಇರಬಹುದು. ಇಂಥ ನೀ ರು ಕುಡಿಯಲು ಯೋಗ್ಯ ಎಂಬುದನ್ನು ಭಾರತೀಯ ಮಾನಕ ಬ್ಯುರೊ (ಬಿಐಎಸ್‌) ತಿಳಿಸಿತ್ತು. ಆದರೆ, ಇದು ರಾಯಚೂರಿನಲ್ಲಿ ಪಾಲನೆ ಆಗುತ್ತಿಲ್ಲ.

ADVERTISEMENT

ನಗರದಲ್ಲಿ ವಾಂತಿ ಭೇದಿ ಪ್ರಕರಣ ಹೆಚ್ಚಾದ ಬಳಿಕ ಮೇ 29ರಿಂದ ಜೂನ್‌ 3ರವರೆಗೆ 110 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಬಳ್ಳಾರಿಯಲ್ಲಿರುವ ಆರೋಗ್ಯ ಇಲಾಖೆ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಅವುಗಳಲ್ಲಿ 24 ಮಾದರಿ ಕುಡಿಯಲು ಯೋಗ್ಯವಲ್ಲ ಎಂದು ವರದಿ ನೀಡಿದೆ.

ರಾಯಚೂರು ನಗರದಲ್ಲಿ ಆಶಾ ಕಾರ್ಯಕರ್ತೆಯರು 1,832 ಮನೆಗಳ ಸಮೀಕ್ಷೆ ಮಾಡಿದ್ದು, 95 ಮನೆಗಳಲ್ಲಿ ಜನರು ವಾಂತಿಭೇದಿ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ. 85 ಜನರನ್ನು ಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಗಿತ್ತು.

ತುಂಗಭದ್ರಾ ನದಿ ನೀರು ಶುದ್ಧೀಕರಣ ಮಾಡುವ ರಾಂಪುರ ಘಟಕದಲ್ಲಿ ಹೂಳು ತುಂಬಿರುವುದು ಮತ್ತು ಯಂತ್ರಗಳು ಕೆಟ್ಟು ನಿಂತು ತುಕ್ಕು ಹಿಡಿದಿರುವುದನ್ನು ಜಿಲ್ಲಾಡಳಿತವು ಗುರುತಿಸಿದೆ. ಫಿಲ್ಟರ್‌ಬೆಡ್‌ ಕೂಡ ಸಮರ್ಪಕವಾಗಿಲ್ಲ. ಒಟ್ಟಾರೆ, ನಗರಸಭೆ ಜನರಿಗೆ ಶುದ್ಧ ನೀರು ಪೂರೈಸುತ್ತಿಲ್ಲ ಎಂಬುದನ್ನು ದೃಢಪಡಿಸಿಕೊಂಡು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ರಾಂಪುರದಲ್ಲಿರುವ 10 ಎಂಎಲ್‌ಡಿ ಸಾಮರ್ಥ್ಯದ ಹಳೆ ಫಿಲ್ಟರ್‌ ಬೆಡ್‌ ಮತ್ತು ಕ್ಲಾರಿಫೈ ಮತ್ತು ನೂತನವಾಗಿ ನಿರ್ಮಿಸಿ ಬಳಕೆಯಾಗದೆ ಬಿದ್ದಿರುವ 12.5 ಎಂಎಲ್‌ಡಿ ಸಾಮರ್ಥ್ಯದ ಫಿಲ್ಟರ್‌ಬೆಡ್‌ಗಳನ್ನು ದುರಸ್ತಿಗೊಳಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.