ADVERTISEMENT

ಚುರುಕುಗೊಂಡ ಮಳೆ: ಇಲಾಖೆಯಿಂದ ಮುಂಜಾಗ್ರತಾ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 12:42 IST
Last Updated 6 ಜುಲೈ 2019, 12:42 IST
ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿರುವುದು
ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿರುವುದು   

ಸಿದ್ದಾಪುರ: ಸಿದ್ದಾಪುರ ಹಾಗೂ ಸುತ್ತಮುತ್ತಲ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ.

ಶನಿವಾರವೂ ಕೂಡ ಬೆಳಗ್ಗಿನಿಂದಲೇ ಮಳೆಯಾಗುತ್ತಿದ್ದು, ಅಮ್ಮತ್ತಿ, ಪಾಲಿಬೆಟ್ಟ, ಮರಗೋಡು ವ್ಯಾಪ್ತಿಯಲ್ಲೂ ಕೂಡ ಉತ್ತಮ ಮಳೆಯಾಗಿದೆ. ಗುಹ್ಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ಗಾಳಿಗೆ ಮರದ ಕೊಂಬೆಯೊಂದು ಬಿದ್ದು, ವಿದ್ಯುತ್ ತಂತಿ ತುಂಡಾಗಿದೆ.

ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚೆನ್ನಂಗಿ ಗುಡ್ಲೂರು ವ್ಯಾಪ್ತಿಯ ನಿವಾಸಿ ಚಿಣ್ಣಪ್ಪ ಎಂಬವರ ಮನೆಯ ಗೋಡೆಯ ಒಂದು ಬದಿ ಮಳೆಯಿಂದಾಗಿ ಕುಸಿದಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಲೆಕ್ಕಿಗ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಕಾವೇರಿ ನದಿಯ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಕುಂಬಾರಗುಂಡಿ ಹಾಗೂ ಬರಡಿ ವ್ಯಾಪ್ತಿಯ ನದಿ ದಡದ ನಿವಾಸಿಗಳಿಗೆ ಮುಂಜಾಗೃತಾ ಕ್ರಮವಾಗಿ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿದೆ. ನದಿಯ ನೀರು ಹೆಚ್ಚಾಗುತ್ತಿದ್ದು, ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ನಿವಾಸಿಗಳು ಮುಂಜಾಗ್ರತೆಯಿಂದ ಇರಬೇಕೆಂದು ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಕೆ.ಜೆ ಮಧುಸೂಧನ್, ಗ್ರಾಮ ಲೆಕ್ಕಿಗ ಅನುಷಾ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ಮಳೆ ಇಲ್ಲದೇ ಇತ್ತ ಕಳೆದ ಕೆಲವು ದಿನಗಳಿಂದಕೃಷಿಕರು ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದು, ಮಳೆ ಚುರುಕುಗೊಂಡಿರುವುದು ಕೃಷಿಕರಲ್ಲಿ ಮಂದಹಾಸ ಮೂಡಿದೆ. ಭತ್ತದ ಗದ್ದೆಯಲ್ಲಿ ನೀರು ತುಂಬಿದ್ದು, ಬಿತ್ತನೆ ಬೀಜ ಹಾಕುವ ಕೆಲಸ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.