ADVERTISEMENT

ಕೊಳ್ಳೇಗಾಲ, ಮಂಡ್ಯ, ಹಾಸನದಲ್ಲಿ ಧಾರಾಕಾರ ಮಳೆ

ನೆಲಕ್ಕುರುಳಿದ ಮರಗಳು, ಕೋಡಿ ಬಿದ್ದ ಕೆರೆ–ಕಟ್ಟೆಗಳು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:31 IST
Last Updated 24 ಸೆಪ್ಟೆಂಬರ್ 2019, 19:31 IST
ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಗಾಣಾಳು ಬಳಿ, ಶಿಂಷಾ ನದಿಯ ‘ಬೆಂಕಿ ಜಲಪಾತ‘ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ
ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಗಾಣಾಳು ಬಳಿ, ಶಿಂಷಾ ನದಿಯ ‘ಬೆಂಕಿ ಜಲಪಾತ‘ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ   

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ.‌

ಮಂಡ್ಯ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಲಹಳ್ಳಿ ಕೊಳೆಗೇರಿಯ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ವಸ್ತುಗಳು ಹಾಳಾಗಿವೆ. ತಾಲ್ಲೂಕಿನ ಕೆರಗೋಡು, ಕಸಬಾ ಮತ್ತು ದುದ್ದ ಹೋಬಳಿ ವ್ಯಾಪ್ತಿಯ ಕೆರೆಕಟ್ಟೆಗಳು ಕೋಡಿ ಬಿದ್ದಿವೆ.

ಮಳವಳ್ಳಿ ತಾಲ್ಲೂಕು ಹಲಗೂರು ಭಾಗದಲ್ಲೂ ಭಾರಿ ಮಳೆಯಾಗಿದೆ ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ಮಳಿಗೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಮೀಪದ ಶಿಂಷಾ ನದಿ ತುಂಬಿ ಹರಿಯುತ್ತಿದ್ದು, ಬೆಂಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ADVERTISEMENT

ಕನ್ನಲಿ, ಹೊಸ ಬೂದನೂರು ಗ್ರಾಮಗಳ ಕೆರೆಗಳು ಕೋಡಿ ಬಿದ್ದಿದ್ದು, 140 ಎಕರೆ ಜಮೀನಿಗೆ ನೀರು ನುಗ್ಗಿದೆ. ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಕೆ.ಆರ್‌.ಪೇಟೆ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

ಹಾಸನದಲ್ಲಿ ಮಂಗಳವಾರ ಬೆಳಗಿನ ಜಾವದವರೆಗೂ ಸುರಿಯಿತು. ಚನ್ನರಾಯಪಟ್ಟಣ ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಮಂಗಳವಾರ ಬೆಳಿಗ್ಗೆ 8.30ರ ಸಮಯದಲ್ಲಿ ಕುಸಿದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾರೂ ಇರದ ಕಾರಣ ಅನಾಹುತ ತಪ್ಪಿದೆ. ಅರಸೀಕೆರೆ ತಾಲ್ಲೂಕಿನ ಹಳೇಕಲ್ಲನಾಯಕನಹಳ್ಳಿಯ ಹಾಗೂ ಮುರುಂಡಿ ಗ್ರಾಮದ ಬಣಜಾರ ತಾಂಡಾದಲ್ಲಿ ಒಂದೊಂದು ಮನೆ ಕುಸಿದಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾತ್ರಿಯಿಡೀ ಭರ್ಜರಿ ಮಳೆಯಾಗಿದ್ದು, ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. 27ಕ್ಕೂ ಅಧಿಕ ಗಿಡಮರಗಳು ನೆಲಕ್ಕುರುಳಿದ್ದು, 47 ಮನೆಗಳಿಗೆ ನೀರು ನುಗ್ಗಿ‌ದೆ.

ಟಿ.ಸಿ. ಹುಂಡಿ ಗ್ರಾಮದ ಮುಖ್ಯರಸ್ತೆಯಲ್ಲಿನ ಬೃಹತ್‌ ಆಲದ ಮರವೊಂದು ಬುಡಸಮೇತ ಉರುಳಿಬಿದ್ದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಅನುದಾನರಹಿತ ಶಾಲೆ ಕೊಠಡಿಯ ಗೋಡೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.